ಮುಖ್ಯಮಂತ್ರಿ ಬದಲಾವಣೆಯಾದರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ : ಯಾಸೀನ್ ಜವಳಿ

ಬೆಂಗಳೂರು : ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವೆ ಆದರೆ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವೆ ಕಳೆದುಕೊಳ್ಳಲಿದೆ ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷ ಯಾಸೀನ್ ಜವಳಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಕೇವಲ ಹಾಲುಮತ ಸಮಾಜಕ್ಕೆ ಸೇರಿದ ನಾಯಕರಲ್ಲ, ಸಮಸ್ತ ಅಹಿಂದ ವರ್ಗದ ಹೆಮ್ಮೆಯ ಪ್ರಶ್ನಾತೀತ ನಾಯಕ. ಗಣಿ ಹಗರಣದ ವಿರುದ್ದ ಗುಡುಗಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಅಪಾರ ಜನ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನ್ನಭಾಗ್ಯದಂತಹ ಮಹೋನ್ನತ ಯೋಜನೆಯನ್ನು ಪ್ರಥಮ ಅವಧಿಯಲ್ಲಿ ರೂಪಿಸಿದರು. ಈಗ ಎರಡನೆ ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ, ಇದು ನಿಜವೆ ಆಗಿದ್ದರೆ ಕಾಂಗ್ರೆಸ್ ಪಕ್ಷ ದೊಡ್ಡ ಹಿನ್ನೆಡೆ ಅನುಭವಿಸಲಿದೆ ಎಂದು ಯಾಸೀನ್ ಜವಳಿ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಯಾಗುವುದಾದರೆ ದಲಿತ ಅಥವಾ ಮುಸ್ಲಿಮ್ ಸಮುದಾಯದ ನಾಯಕರಿಗೆ ಅವಕಾಶ ಮಾಡಿಕೊಡಬೇಕು, ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿರುವ ದಲಿತ ಬಾಂಧವರು ಹಾಗೂ ಮುಸ್ಲಿಮ್ ಬಾಂಧವರು ಇಂದಿನವರೆಗೂ ಮುಖ್ಯಮಂತ್ರಿಯಾಗಿಲ್ಲ, ಇವರು ಕೇವಲ ಮತ ಹಾಕಲು ಮಾತ್ರ ಬೇಕೆ? ಅಧಿಕಾರ ಬಂದಾಗ ಈ ಸಮುದಾಯಕ್ಕೆ ಪ್ರಾತಿನಿಧ್ಯ ಬೇಡವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸಮುದಾಯಗಳಿಗೆ ಕಾಂಗ್ರೆಸ್ ಆದ್ಯತೆ ನೀಡುವುದಾದರೆ ಈ ವರ್ಗದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ, ಇಲ್ಲವಾದರೆ ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬಾರದು ಎಂದು ಕಾಂಗ್ರೆಸ್ ಹೈಕಮಾಂಡ್‍ಗೆ ಯಾಸೀನ್ ಜವಳಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







