ಮಹಿಳೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ: ವರ್ತೂರು ಪೊಲೀಸರು ವಿರುದ್ಧ ಗಂಭೀರ ಆರೋಪ

ಸಾಂದರ್ಭಿಕ ಚಿತ್ರ
ಬೆಂಗಳೂರು : ವಿಚಾರಣೆ ವೇಳೆ ಮಹಿಳೆಯೊಬ್ಬರ ಖಾಸಗಿ ಅಂಗಗಳ ಮೇಲೆ ವರ್ತೂರು ಠಾಣಾ ಪೊಲೀಸರು ಹಲ್ಲೆ ನಡೆಸಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಪಶ್ಚಿಮ ಬಂಗಾಳ ಮೂಲದ ಸುಂದರಿ ಬೀಬಿ(34) ಎಂದು ಗುರುತಿಸಲಾಗಿದೆ. ವರ್ತೂರು ಪೊಲೀಸರು ಮಹಿಳೆಯ ತಲೆ, ಬೆನ್ನು, ಕೈ-ಕಾಲು ಹಾಗೂ ಖಾಸಗಿ ಅಂಗಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆಯ ದೇಹದ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಲಾಗಿದೆ. ನಗರದ ಬೌರಿಂಗ್ ಆಸ್ಪತ್ರೆಯ ಎಂಎಲ್ಸಿ ವರದಿಯಲ್ಲಿ ಗಾಯದ ಭೀಕರತೆಯ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಮಹಿಳೆ ಸುಂದರಿ ಬೀಬಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾಟ್ರ್ಮೆಂಟ್ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅವರು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಅವರ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ವರ್ತೂರು ಪೊಲೀಸರಿಗೆ ಮಹಿಳೆ ವಿರುದ್ಧ ದೂರು ಕೂಡ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಮಹಿಳೆ ಕರೆತಂದು ಪೊಲೀಸರು ಖಾಸಗಿ ಅಂಗ, ಕೈಕಾಲು ಮತ್ತು ತಲೆಗೆ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.







