ಬೆಂಗಳೂರು | ಶೌಚಾಲಯ, ಕುಡಿಯುವ ನೀರು ಕೇಳಿದ ಕೊಳಗೇರಿ ನಿವಾಸಿಗಳ ಬಂಧನ

ಬೆಂಗಳೂರು : ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿದ ಸರ್ವೇ ನಂ.153ರಲ್ಲಿನ ಸರ್ವಜ್ಞನಗರ, ಕಾಚರಕನಹಳಿಯ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದ ಕಲಬುರಗಿ, ಬಳ್ಳಾರಿ ಮೂಲದ ವಿವಿಧ ಕೊಳಗೇರಿಗಳ ನಿವಾಸಿಗಳನ್ನು ಬಂಧಿಸಿ ಬಿಡುಗಡೆ ಮಾಡಿದ ಘಟನೆ ವರದಿಯಾಗಿದೆ.
ಸೋಮವಾರ ಇಲ್ಲಿನ ನಗರ ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿದ ಕೊಳಗೇರಿ ನಿವಾಸಿಗಳನ್ನು ಪೋಲೀಸರು, ‘ನೀವು ಧರಣಿ, ಪ್ರತಿಭಟನೆ ಮಾಡುವುದಾದರೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಹೋಗಿ, ಡಿಸಿ ಕಚೇರಿಯಲ್ಲಿ ಕೂತರೆ ನಿಮ್ಮನ್ನು ಬಂಧನ ಮಾಡಬೇಕಾಗುತ್ತದೆ’ ಎಂದು ಬೆದರಿಸಿ ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲಿಂದ ಶೇಷಾದ್ರಿಪುರಂನಲ್ಲಿನ ಕೊಳಚೆ ಅಭಿವೃದ್ಧಿ ಮಂಡಳಿ ಕಚೇರಿಗೆ ಧಾವಿಸಿದ ಕೊಳಗೇರಿ ನಿವಾಸಿಗಳನ್ನು ಪೊಲೀಸರು ಬಂಧಿಸಿ, ಆ ಬಳಿಕ ಬಿಡುಗಡೆ ಮಾಡಿದ್ದಾರೆ. ‘ನಮಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಕಾಚರಕನಹಳ್ಳಿ ವ್ಯಾಪ್ತಿಯಲ್ಲಿನ ನಾಲ್ಕು ಘೋಷಿತ ಕೊಳಚೆ ಪ್ರದೇಶದಲ್ಲಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮುಖಂಡರು ಆಗ್ರಹಿಸಿದರು. ಈ ವೇಳೆ ವಿಡುದಲೈ ಚಿರುತೆಗಳ್ ಸಂಘಟನೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಮುಖಂಡರಾದ ಗೋವಿಂದರಾಜ್, ಮೋಸಸ್, ಆಂಜಿ, ಡೇವಿಡ್ ಇನ್ನಿತರರು ಹಾಜರಿದ್ದರು.







