ಬೆಂಗಳೂರು | ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ: ಆರೋಪಿ ಪರಾರಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹಾಡಹಾಗಲೇ ಮನೆಗೆ ನುಗ್ಗಿ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಆರೋಪಿ ಪರಾರಿಯಾಗಿರುವ ಘಟನೆ ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಹೆಬ್ಬಗೋಡಿಯ ಕಾಚನಾಯಕನಹಳ್ಳಿಯ ಮನೆಯೊಂದರಲ್ಲಿ ಮಾದೇಶ(40) ಎಂಬವರ ಹತ್ಯೆಯಾಗಿದೆ. ಕುಟುಂಬಸ್ಥರು ನೀಡಿದ ದೂರು ಆಧರಿಸಿ ಆರೋಪಿಯ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗೆ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ತಿಳಿಸಿದ್ದಾರೆ.
ಕೊಲೆಯಾದ ಮಾದೇಶ್ ಮೂಲತಃ ತಮಿಳುನಾಡಿನ ಡೆಂಕಣಿಕೋಟೆಯ ಬಾರಂದೂರು ನಿವಾಸಿಯಾಗಿದ್ದು, ಹಿಂದಿನ 15 ವರ್ಷಗಳಿಂದ ನಗರದ ಕಾಚನಾಯಕಹಳ್ಳಿಯಲ್ಲಿ ವಾಸವಾಗಿದ್ದರು. ಪ್ರಾವಿಷನ್ ಸ್ಟೋರ್ ನಡೆಸುವುದರ ಜೊತೆಗೆ ಕಂಪೆನಿಯೊಂದರ ಸಿಗರೇಟ್ ವಿತರಕರಾಗಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ನಾರಾಯಣ್ ಹೇಳಿದ್ದಾರೆ.
ಊರಿನಲ್ಲಿರುವ ಜಮೀನು ಮಾರಾಟ ಮಾಡಿದ್ದ ಮಾದೇಶ್, ನಗರದಲ್ಲಿ ಹೊಸ ಮನೆ ಕಟ್ಟುತ್ತಿದ್ದರು. ಇತ್ತೀಚೆಗೆ ಅವರಿಗೆ ಗ್ಯಾಂಗ್ರೀನ್ ಖಾಯಿಲೆ ಬಂದಿದ್ದರಿಂದ ಹೆಚ್ಚು ಓಡಾಡುತ್ತಿರಲಿಲ್ಲ. ಮಂಗಳವಾರ ಮಧ್ಯಾಹ್ನ ಮಾದೇಶ್ ಮನೆಯಲ್ಲಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಮನೆಗೆ ನುಗ್ಗಿ ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಪಕ್ಕದ ಮನೆ ವ್ಯಕ್ತಿಯೊಬ್ಬ ಈ ಕೃತ್ಯವನ್ನು ಕಂಡು ಆರೋಪಿಯನ್ನು ಹಿಡಿಯಲು ಹೋದಾಗ ಅವರ ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಡಿಸಿಪಿ ನಾರಾಯಣ್ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಏರ್ ಪಿಸ್ತೂಲ್, ಮೆಟಲ್ ಡಿಟೆಕ್ಟರ್, ಟಾರ್ಚ್ ಸೇರಿದಂತೆ ಇನ್ನಿತರ ವಸ್ತುಗಳು ಪತ್ತೆಯಾಗಿವೆ. ಮನೆಯಲ್ಲಿ ಎರಡು ಲಕ್ಷ ಹಣವಿದ್ದರೂ ಆರೋಪಿ ತೆಗೆದುಕೊಂಡು ಹೋಗಿಲ್ಲ. ಈ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪರಿಚಿತರೇ ಕೊಲೆ ಮಾಡಿದ್ದಾರಾ? ಅಥವಾ ಯಾವ ಉದ್ದೇಶಕ್ಕಾಗಿ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಡಿಸಿಪಿ ನಾರಾಯಣ್ ಮಾಹಿತಿ ನೀಡಿದ್ದಾರೆ.







