ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮೇಟಿ ಕಾರಣ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ : ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣ ಮಾಡಲು ಶಾಸಕ ಎಚ್.ವೈ.ಮೇಟಿ ಕಾರಣ. ಅವರ ಆಸೆಯಂತೆ ಈಗಾಗಲೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೆ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಆದರೆ, ಈ ಸಂದರ್ಭದಲ್ಲಿ ಅವರು ನಮ್ಮೊಂದಿಗೆ ಇಲ್ಲದಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಬಾಗಲಕೋಟೆಯಲ್ಲಿ ಎಚ್.ವೈ.ಮೇಟಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1983 ರಿಂದ ಮೇಟಿ ಅವರೊಂದಿಗೆ ಒಡನಾಡವಿತ್ತು. ನಾನು ಜನತಾ ಪಕ್ಷ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಾನು ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿದ್ದರು ಎಂದು ಹೇಳಿದರು.
ಅಹಿಂದ ಸಂಘಟನೆಯಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಮೇಟಿ ಒಬ್ಬ ನಿಷ್ಠಾವಂತ ರಾಜಕಾರಣಿ. ನಾನು ಅವರಿಂದ ಒಂದು ವರ್ಷ ಕಿರಿಯನಾಗಿದ್ದರೂ, ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಸೇವೆ ಸಲ್ಲಿಸಿದ ಅವರು ವಿನಯವಂತರಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಅಧಿಕಾರ ಶಾಶ್ವತವಲ್ಲ. ಜನರಿಂದ ದೊರಕುವ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕು. ಬಹಳ ವಿದ್ಯಾವಂತರಲ್ಲದಿದ್ದರೂ, ರಾಜಕೀಯ ತತ್ವಗಳನ್ನು ತಪ್ಪದೆ ಪಾಲಿಸುತ್ತಿದ್ದರು. ಜನರೊಂದಿಗೆ ಬೆರೆಯುವ ಗುಣವಿದ್ದ ಮೇಟಿ ಕುರುಬ ಸಮುದಾಯದವರಾಗಿದ್ದರೂ, ಜಾತ್ಯತೀತ ತತ್ವದ ಪಾಲಕರಾಗಿದ್ದರು. ಎಲ್ಲ ಜಾತಿ ಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.
ಮೇಟಿಯವರ ನಿಧನದಿಂದ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. 1996ರಲ್ಲಿ ಬಾಗಲಕೋಟೆಯಲ್ಲಿ ಸಮೀಕ್ಷೆ ಮಾಡಿಸಿ, ಮೇಟಿಯವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರವಾಗಿತ್ತು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಮೇಟಿ, ನನ್ನ ಮಾತನ್ನು ಗೌರವಿಸಿ, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಸಾಧಿಸಿದರು. ದೇವೇಗೌಡರು ಪ್ರಧಾನಿಯಾಗಲು ಇವರು ಕಾರಣಕರ್ತರು ಎಂದು ಸಿದ್ದರಾಮಯ್ಯ ಹೇಳಿದರು.







