ಪಶ್ಚಿಮಘಟ್ಟದಲ್ಲಿ ಕಾರ್ಯಗತವಾದ ಯೋಜನೆಗಳ ಪರಾಮರ್ಶೆಗೆ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು : ಪಶ್ಚಿಮಘಟ್ಟದಲ್ಲಿ ಕಾರ್ಯಗತವಾಗಿರುವ ರಸ್ತೆ ಮತ್ತಿತರ ಯೋಜನೆಗಳಲ್ಲಿ ಷರತ್ತುಗಳ ಅನುಪಾಲನೆ ಆಗಿದೆಯೆ ಇಲ್ಲವೆ ಎಂಬ ಬಗ್ಗೆ ಪರಾಮರ್ಶೆ ನಡೆಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಬುಧವಾರ ನಗರದ ಅರಣ್ಯ ಭವನದಲ್ಲಿ ನಡೆದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 4ನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಿರೂರು ಸೇರಿದಂತೆ ಹಲವೆಡೆ ಗುಡ್ಡ ಕುಸಿತ ಆಗಿದ್ದು, ಗುಡ್ಡವನ್ನು 90 ಡಿಗ್ರಿಯಲ್ಲಿ ಕಡಿಯುವ ಬದಲು, 45 ಡಿಗ್ರಿ ಕೋನದಲ್ಲಿ ಕಡಿದರೆ ಕುಸಿತ ತಡೆಯಬಹುದು ಎಂದರು.
ಅರಣ್ಯ, ವನ್ಯಜೀವಿಧಾಮಗಳಲ್ಲಿ ಯಾವುದೆ ಯೋಜನೆಗೆ ಅನುಮತಿ ನೀಡುವಾಗ ವನ್ಯಜೀವಿಗಳಿಗೆ ತೊಂದರೆ ಆಗದಂತೆ ಅಪಾಯ ತಗ್ಗಿಸುವಿಕೆ ಪರಿಹಾರಗಳೊಂದಿಗೆ ಪ್ರಸ್ತಾವನೆ ಮಂಡಿಸುವುದನ್ನು ಕಡ್ಡಾಯಗೊಳಿಸಲು ಈಶ್ವರ್ ಖಂಡ್ರೆ ನಿರ್ದೇಶನ ನೀಡಿದರು.
ಶರಾವತಿಯ ಸಿಂಹಬಾಲದ ಸಿಂಗಳೀಕ ವನ್ಯಜೀವಿಧಾಮದ ಅರಣ್ಯ ಪ್ರದೇಶವನ್ನು ಬಿಡುಗಡೆಗೊಳಿಸುವ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಅನುಮೋದನೆಗಾಗಿ ಶಿಫಾರಸ್ಸು ಮಾಡುವಂತೆ ಸೆಪ್ಟೆಂಬರ್ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯ ಅನುಮೋದನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕಳುಹಿಸಿ ಎಂದು ಅವರು ಸೂಚಿಸಿದರು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 291 ಜನವಸತಿ ಪ್ರದೇಶಗಳಿಗೆ (ಯೋಜನೆಯ ಹಂತ-2ರಲ್ಲಿ 193 ಜನವಸತಿ ಪ್ರದೇಶಗಳಿಗೆ) ಕುಡಿಯುವ ನೀರಿನ ಸಂಪರ್ಕ ನೀಡುವ ಪ್ರಸ್ತಾವನೆಯ ಬಗ್ಗೆ ಚರ್ಚಿಸಿದ ಮಂಡಳಿ, 4.4573 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಿಡುಗಡೆಗೊಳಿಸುವ ಪ್ರಸ್ತಾವನೆನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಅನುಮೋದನೆಗಾಗಿ ಶಿಫಾರಸ್ಸು ಮಾಡಲು ತೀರ್ಮಾನಿಸಿತು.
ಬಿಎಸ್ಸೆನ್ನೆಲ್ ಅತ್ತಿವೇರಿ ಪಕ್ಷಿಧಾಮ, ಶರಾವತಿ ಸಿಂಗಳೀಕ ವನ್ಯಜೀವಿಧಾಮ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ಸಂವಹನ ಕಂಬಗಳನ್ನು ಅಳವಡಿಸುವ ಪ್ರಸ್ತಾವನೆಯನ್ನು ಮುಂದೂಡಲು ಮತ್ತು ಮುಂದಿನ ಸಭೆಯಲ್ಲಿ ಪರಿಸರಕ್ಕೆ, ಪಶು ಪಕ್ಷಿಗಳಿಗೆ ಆಗುವ ತೊಂದರೆಯ ಕುರಿತಂತೆ ವಿವರ ನೀಡಲು ಸೂಚಿಸಲಾಯಿತು.
ಶರಾವತಿ ಸಿಂಗಳೀಕ ವನ್ಯಜೀವಿಧಾಮ, ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ವಲಯ ಹಾಗೂ ಸೋಮೇಶ್ವರ ವನ್ಯಜೀವಿಧಾಮದಲ್ಲಿ ರಸ್ತೆ ನಿರ್ಮಾಣ, ಅಗಲೀಕರಣ ಯೋಜನೆಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡುವ ಪೂರ್ವದಲ್ಲಿ ವನ್ಯಜೀವಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಯೋಜನೆ ರೂಪಿಸುವ ಷರತ್ತಿನೊಂದಿಗೆ ಸಮ್ಮತಿಸಲು ಅನುಮೋದನೆ ನೀಡಲಾಯಿತು.
ಚಿತ್ತಾಪುರದಲ್ಲಿ ಚಿರತೆ ಸಂರಕ್ಷಣಾ ಮೀಸಲು ಸ್ಥಾಪಿಸುವ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಮತ್ತು ವರದಿ ಸಲ್ಲಿಸುವಂತೆ ಈಶ್ವರ್ ಖಂಡ್ರೆ ಸೂಚಿಸಿದರು. ಸಭೆಯಲ್ಲಿ ಮಂಡಳಿಯ ಸದಸ್ಯರು ಹಾಗೂ ಶಾಸಕ ಅಶೋಕ್ ಪಟ್ಟಣ್, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್, ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
‘ಕೆರೆಕಟ್ಟೆ ಆನೆಗೆ ರೇಡಿಯೊ ಕಾಲರ್ ಹಾಕಿ ಕಾಡಿಗೆ ಬಿಡಿ’: ಚಿಕ್ಕಮಗಳೂರು ಜಿಲ್ಲೆ ಕೆರೆಕಟ್ಟೆ ಬಳಿ ಸೆರೆ ಹಿಡಿಯಲಾಗಿರುವ ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗೆ ಬಿಡುವುದು ಸೂಕ್ತ. ಇತ್ತೀಚೆಗೆ ಇಬ್ಬರ ಸಾವಿಗೆ ಕಾರಣವಾದ ಆನೆಯನ್ನು ಸೆರೆ ಹಿಡಿದು ಶಿಬಿರದಲ್ಲಿರಿಸಲಾಗಿದೆ. ಆನೆಯ ಸ್ವಭಾವದ ಪರಾಮರ್ಶೆ ನಡೆಸಿ, ಉನ್ನತಾಧಿಕಾರಿಗಳು ಹಾಗೂ ತಜ್ಞರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಸೂಚಿಸಿದರು.







