ಸಂಪುಟದಿಂದ ಝಮೀರ್ ಅಹ್ಮದ್ರನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ದೂರು

ಬಿ.ಝಡ್.ಝಮೀರ್ ಅಹ್ಮದ್ ಖಾನ್
ಬೆಂಗಳೂರು : ರಾಜ್ಯದ ರೈತರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೆ ವಂಚಿಸಿರುವ ತೆಲಂಗಾಣ ರಾಜ್ಯದ ವ್ಯಕ್ತಿಗಳ ಪರವಾಗಿ ನಿಂತಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ದೂರು ಸಲ್ಲಿಸಿದೆ.
ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್.ಪಿ. ಎಂಬವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಬರೆದಿರುವ ಪತ್ರದಲ್ಲಿ, ರಾಜ್ಯದ ರೈತರ ಪರವಾಗಿ ನಿಂತು ಅವರಿಗೆ ನ್ಯಾಯ ಒದಗಿಸಬೇಕಾದ ಸಚಿವರು, ತೆಲಂಗಾಣ ರಾಜ್ಯದ ತಮ್ಮ ಸಂಬಂಧಿ ಅಕ್ಬರ್ ಬಿನ್ ತಬರ್ ಎಂಬವರ ಪರವಾಗಿ ನಿಂತು, ಹಣ ವಂಚನೆಗೆ ಸಂಬಂಧಿಸಿದ ದೂರಿನ ಕುರಿತು ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಸರಕಾರಿ ವಾಹನವನ್ನು ಅಕ್ಬರ್ ಬಿನ್ ತಬರ್ ಅವರ ಸ್ವಂತ ಉಪಯೋಗಕ್ಕೆ ನೀಡಿರುವುದು ಕಂಡು ಬಂದಿದೆ. ಸದನದಲ್ಲಿಯೂ ಈ ವಿಚಾರ ಪ್ರಸ್ತಾವವಾಗಿ, ಸ್ವತಃ ಮುಖ್ಯಮಂತ್ರಿ ಆ ವಾಹನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ್ದು, ವಾಸ್ತವಾಂಶ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುವುದಾಗಿ ತಿಳಿಸಿದ್ದರು. ಆದರೆ, ಈ ವಿಚಾರವಾಗಿ ಇಲ್ಲಿಯವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಪ್ರದೀಪ್ ಕುಮಾರ್ ಗಮನ ಸೆಳೆದಿದ್ದಾರೆ.





