ಬೆಂಗಳೂರು | ಜೂಜಾಟ ಸಾಲ ತೀರಿಸಲು ವೃದ್ಧೆಯನ್ನು ಹತ್ಯೆಗೈದ ದಂಪತಿ ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ವೃದ್ಧೆಯೊಬ್ಬರನ್ನು ಹತ್ಯೆಗೈದಿದ್ದ ಪ್ರಕರಣವನ್ನು ಭೇದಿಸಿರುವ ಸುಬ್ರಮಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದು, ಆನ್ಲೈನ್ ಜೂಜಾಡಲು ಮಾಡಿದ್ದ ಲಕ್ಷಾಂತರ ಸಾಲ ತೀರಿಸಲು ಹತ್ಯೆ ಮಾಡಿರುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಶ್ರೀಲಕ್ಷ್ಮಿ (65) ಹತ್ಯೆಯಾದ ವೃದ್ಧೆ ಆಗಿದ್ದು, ಈಕೆಯ ಪತಿ ಅಶ್ವಥ್ ನಾರಾಯಣ್ ಎಂಬವರು ನೀಡಿದ ದೂರಿನ ಮೇರೆಗೆ ಇವರ ಮನೆಯಲ್ಲಿ ಬಾಡಿಗೆಗಿದ್ದ ದಂಪತಿ ಪ್ರಸಾದ್ ಶ್ರೀಶೈಲ ಮಕಾಯ್ ಹಾಗೂ ಪತ್ನಿ ಸಾಕ್ಷಿ ಎಂಬವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಪ್ರಸಾದ್, ವಿಜಯಪುರ ಮೂಲದ ಸಾಕ್ಷಿ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆರೋಪಿ ಆನ್ಲೈನ್ ಜೂಜಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ತೀರಿಸಲಾಗದೆ ಪರಿತಪಿಸುತ್ತಿದ್ದ. ಸಾಲಗಾರರ ಕಾಟಕ್ಕೆ ತಾಳಲಾರದೆ ಸ್ವಂತ ಊರು ಬಿಟ್ಟಿದ್ದ ಎನ್ನಲಾಗಿದೆ.
ಕಳೆದ ಎಪ್ರಿಲ್ನಲ್ಲಿ ದಂಪತಿ ಬೆಂಗಳೂರಿಗೆ ಬಂದು ವೃದ್ದೆ ಶ್ರೀಲಕ್ಷ್ಮೀ ಮನೆಯಲ್ಲಿ ಬಾಡಿಗೆಗೆ ಇದ್ದರು. ಪ್ರಸಾದ್ ದಿನಗೂಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಚಿನ್ನ ಮಾರಾಟ ಮಳಿಗೆಯೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲಗಾರರ ಕಾಟ ಹೆಚ್ಚಾಗುತ್ತಿದ್ದಂತೆ ಪ್ರಸಾದ್ ದಿಕ್ಕುತೋಚದಂತಾಗಿದ್ದ. ಅಲ್ಲದೆ, ಸಾಲಗಾರರು ಈತನ ಮನೆ ವಿಳಾಸವನ್ನು ಪತ್ತೆ ಹಚ್ಚಿ, ಮನೆ ಬಳಿ ಬರುವುದಾಗಿ ಹೇಳಿದ್ದರು. ಸಾಲ ತೀರಿಸಲು ಒಂದು ದಿನದ ಮಟ್ಟಿಗೆ ಸಾಲಗಾರರಿಗೆ ಕಾಲಾವಕಾಶ ಕೇಳಿದ್ದ. ಮನೆ ಮಾಲಕಿ ಶ್ರೀಲಕ್ಷ್ಮೀ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ದೋಚುವ ಬಗ್ಗೆ ಪತ್ನಿ ಬಳಿ ಚರ್ಚಿಸಿದ್ದ ಎನ್ನಲಾಗಿದೆ.
ಕೃತ್ಯ ನಡೆಸಲು ಆಕೆಯು ಸಹಮತಿ ವ್ಯಕ್ತಪಡಿಸಿದಾಗ ನವೆಂಬರ್ 4ರಂದು ವೃದ್ದೆ ಒಬ್ಬರೇ ಇದ್ದಾಗ ಟಿವಿ ನೋಡುವ ನೆಪದಲ್ಲಿ ಪ್ರಸಾದ್ ಮನೆಯೊಳಗೆ ಹೋದರೆ, ಪತ್ನಿ ಹೊರಗಡೆ ಕಾವಲು ಕಾಯುತ್ತಿದ್ದಳು. ಚಿನ್ನದ ಸರ ಕಸಿಯಲು ಮುಂದಾದಾಗ ವೃದ್ಧೆಯು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಆರೋಪಿ ಆಕೆಯ ಸೀರೆಯ ಸೆರಗಿನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆ ಬಳಿಕ 52 ಗ್ರಾಂ ಚಿನ್ನಾಭರಣ ಹೊತೊಯ್ದು ಪರಾರಿಯಾದ ಒಂದೇ ಗಂಟೆಯಲ್ಲಿ ಚಿನ್ನ ಅಡವಿಟ್ಟಿದ್ದ. ಬಂದ ಹಣದಲ್ಲಿ ಸ್ನೇಹಿತಗೆ 20 ಸಾವಿರ ರೂ. ಸಾಲ ತೀರಿಸಿದ್ದ. ಬಳಿಕ ಏನೂ ಮಾಡಿಲ್ಲದವನಂತೆ ಮನೆಗೆ ಬಂದಿದ್ದ. ಸ್ಥಳದಲ್ಲಿದ್ದ ಪೊಲೀಸರಿಗೆ ಸಂಜೆ 4 ಗಂಟೆ ವೇಳೆ ವೃದ್ಧೆಯನ್ನು ಮಾತನಾಡಿಸಿದ್ದೆ ಎಂದಿದ್ದ.
ಆದರೆ ದೂರುದಾರ ಅಶ್ವಥ್ ನಾರಾಯಣ್ ಅವರು ಮಧ್ಯಾಹ್ನ 2 ಗಂಟೆಯಿಂದ ಪತ್ನಿಯು ಮೊಬೈಲ್ ಕರೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದರು. ಇಬ್ಬರೂ ಗೊಂದಲದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ತೀವ್ರವಾಗಿ ಪ್ರಶ್ನಿಸಿದಾಗ ಕೃತ್ಯವೆಸಗಿರುವುದನ್ನು ಪ್ರಸಾದ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.







