ಸಂಸ್ಕರಿಸಿದ ನೀರಿನ ಗುಣಮಟ್ಟ ಖಾತ್ರಿಗೆ ಏಕೀಕೃತ ನೀತಿ ಅಳವಡಿಕೆ : ಡಾ.ವಿನೋದ್ ಪಾಲ್

ಬೆಂಗಳೂರು : ದೇಶಾದ್ಯಂತ ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಏಕೀಕೃತ ರಾಷ್ಟ್ರೀಯ ಮಾನದಂಡದ ಅವಶ್ಯಕತೆಯಿದ್ದು, ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಏಕೀಕೃತ ನೀತಿಯನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿನೋದ್ ಕೆ. ಪಾಲ್ ಹೇಳಿದ್ದಾರೆ.
ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಬಿಡಬ್ಯೂಎಸ್‌ಎಸ್‌ಬಿ ಮತ್ತು ನೀತಿ ಆಯೋಗ ಆಯೋಜಿಸಿದ್ದ ‘ಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್ ಬಳಕೆ’ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ತಲಾ ನೀರಿನ ಲಭ್ಯತೆ ಈಗಾಗಲೇ 1,400 ಘನ ಮೀಟರ್‌ಗಳಿಗಿಂತ ಕಡಿಮೆಯಾಗಿದೆ. 2030ರೊಳಗೆ ಶೇ.50 ಪುನರ್‌ಬಳಕೆ ಮತ್ತು 2045ರೊಳಗೆ ಶೇ.100 ಪುನರ್‌ಬಳಕೆಯನ್ನು ಮಾಡುವ ನಿಟ್ಟಿನಲ್ಲಿ ದೇಶವು ನಿರ್ಣಾಯಕ ಹೆಜ್ಜೆ ಇಡಬೇಕು. ಪ್ರಸ್ತುತ ಕೇವಲ 11 ರಾಜ್ಯಗಳಿಗೆ ಮಾತ್ರ ಸಂಸ್ಕರಿಸಿದ ನೀರಿನ ಪುನರ್‌ಬಳಕೆ ನೀತಿ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿದರು. ಈ ವೇಳೆ ‘ಬಿಡಬ್ಲುಎಸ್‌ಎಸ್‌ಬಿ: ದೃಷ್ಟಿ ಮತ್ತು ಸೇವೆಯ ಪರಂಪರೆ’ ಮತ್ತು ‘ಬೆಂಗಳೂರಿನಲ್ಲಿ ನೀರಿನ ಪುನರ್‌ಬಳಕೆಯ ಒಂದು ಝಲಕ್’ ಎಂಬ ಸಾಕ್ಷಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಿಡಬ್ಲುಎಸ್‌ಎಸ್‌ಬಿ ಅಧ್ಯಕ್ಷ ಡಾ. ವಿ. ರಾಮ ಪ್ರಸಾತ್ ಮನೋಹರ್, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಡಿ.ತಾರಾ ಮತ್ತಿತರರು ಇದ್ದರು.







