ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಕ್ರಮವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದೆ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ಬಿಜೆಪಿ ಪಕ್ಷವು ಸತತವಾಗಿ ಮೂರು ಬಾರಿ ಮತಗಳ್ಳತನ ಮಾಡುವ ಮೂಲಕ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂದಿನ ಪೀಳಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಶುಕ್ರವಾರ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಬಿಜೆಪಿ ಮತಗಳ್ಳತನ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದು ದೇಶದ ಜನತೆಗೆ ಮಾಡುತ್ತಿರುವ ಮಹಾಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ 100 ಲೋಕಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ಆಗಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ನಮ್ಮ ರಾಜ್ಯದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತಗಳ್ಳತನ ಆಗಿರುವುದು ಸಾಬೀತಾಗಿದೆ. ಈ ಮತಗಳ್ಳತನ ಕುರಿತು ದೇಶದ ಜನರಿಗೆ ತಿಳಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಮುನಿಯಪ್ಪ ಹೇಳಿದರು.
ಬಿಜೆಪಿ ಪಕ್ಷವು ಸಂವಿಧಾನ ಬಾಹಿರವಾದ ಕೆಲಸ ಮಾಡುತ್ತಿದೆ. ಮತಗಳ್ಳತನದಿಂದ ಅಧಿಕಾರ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಯಾರು ಅತಿ ಹೆಚ್ಚು ಸಹಿ ಸಂಗ್ರಹ ಮಾಡುತ್ತಾರೊ ಅವರನ್ನು ನೇರವಾಗಿ ರಾಹುಲ್ ಗಾಂಧಿ ಅವರೊಂದಿಗೆ ಭೇಟಿ ಮಾಡಿಸಲಾಗುವುದು. ಯಾರಿಗೆ ಜನ ಮತ ನೀಡುತ್ತಾರೋ, ಅವರು ರಾಜ್ಯಭಾರ ಮಾಡಬೇಕು. ಆದರೆ, ದೇಶದಲ್ಲಿ ಸಂವಿಧಾನ, ಕಾನೂನು ವಿರುದ್ಧವಾಗಿ ರಾಜ್ಯಭಾರ ಆಗುತ್ತಿದೆ ಎಂದು ಅವರು ದೂರಿದರು.
ಮತಗಳ್ಳತನ ಯಾವ ರೀತಿ ನಡೆದಿದೆ ಎಂದು ರಾಹುಲ್ ಗಾಂಧಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮನ ಮುಟ್ಟುವಂತೆ ತಿಳಿಸುವ ಪ್ರಯತ್ನ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಚುನಾವಣಾ ಆಯೋಗವು ಬಿಜೆಪಿ ಅಧೀನದಲ್ಲಿ ಇರುವಂತೆ ಕಾಣುತ್ತದೆ. ಹೀಗಾಗಿ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸತ್ಯಾಂಶ ತಿಳಿಸಲು ಮತದಾರರಿಂದ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಆರ್.ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ಘಾಟಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ದಪ್ಪ, ನವೀನ್, ಮಹಿಳಾ ಘಟಕದ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.







