ʼಪದ್ಮಲತಾ ಕೊಲೆ ಪ್ರಕರಣʼ ಎಸ್ಐಟಿ ತನಿಖೆ ವ್ಯಾಪ್ತಿಗೆ ತರಲು ಒತ್ತಾಯ

ಸಾಂದರ್ಭಿಕ ಚಿತ್ರ
ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದು, ಪದ್ಮಲತಾ ಕೊಲೆ ಪ್ರಕರಣ ಸಹಿತ ಮುಚ್ಚಿ ಹಾಕಿರುವ ಪ್ರಕರಣಗಳನ್ನೂ ತನಿಖೆ ಮಾಡಬೇಕು ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಒತ್ತಾಯಿಸಿದ್ದಾರೆ.
ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘1986ರಲ್ಲಿ ಸಿಪಿಎಂನ ಧರ್ಮಸ್ಥಳ ಘಟಕದ ಕಾರ್ಯದರ್ಶಿಯ ಪುತ್ರಿ ಪದ್ಮಲತಾ ಅವರನ್ನು ಅಪಹರಣ ಮಾಡಿ, ಕೊಲೆ ಮಾಡಲಾಗಿದೆ. ಪದ್ಮಲತಾ ಅವರ ತಂದೆ ದೇವಾನಂದ್ ಈ ಪ್ರದೇಶದಲ್ಲಿ ಭೂ ಮಾಫಿಯಾ ವಿರುದ್ಧ ಹೋರಾಡಲು ಧೈರ್ಯ ತೋರಿದ್ದರಿಂದ ಅವರನ್ನು ಕೊಲ್ಲಲಾಯಿತು ಎಂದು ಉಲ್ಲೇಖಿಸಿದ್ದಾರೆ.
ಸಿಪಿಎಂನ ಜನಪ್ರತಿನಿಧಿಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಅಂದಿನ ಗೃಹ ಸಚಿವ ಬಿ.ರಾಚಯ್ಯ ಅವರ ಆದೇಶದ ಮೇರೆಗೆ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಅಪರಾಧಿಗಳು ಪ್ರಭಾವಿಗಳಾಗಿದ್ದ ಕಾರಣ ಪ್ರಕರಣವನ್ನು ಮುಚ್ಚಲಾಯಿತು. ನ್ಯಾಯ ದೊರಕದ ಇಂತಹ ಪ್ರಕರಣಗಳು ಸೇರಿ ಇತರ ಎಲ್ಲ ಪ್ರಕರಣಗಳನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ದ ವ್ಯಾಪ್ತಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.





