ಬೆಂಗಳೂರು | ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ‘ಸಹಿ ಸಂಗ್ರಹ ಅಭಿಯಾನ’

ಬೆಂಗಳೂರು : ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ನೇಮಕಾತಿಯಲ್ಲಿನ ಭ್ರಷ್ಟಾಚಾರ ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ, ಎಐಡಿವೈಒ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಎಐಡಿವೈಒ ಉಪಾಧ್ಯಕ್ಷ ಕೃಷ್ಣ, ಕೇಂದ್ರ ಸರಕಾರದಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಕೇಂದ್ರ, ರಾಜ್ಯ ಸರಕಾರಗಳು ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಯುವಜನರನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಲೇ ಇವೆ. ಅದಕ್ಕಾಗಿ ನಿರುದ್ಯೋಗಿ ಯುವಜನರು ದೇಶ ವ್ಯಾಪಿ ಬೃಹತ್ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ್ಪ ಅವರಿಂದ ಸಹಿ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಯಣ್ಣ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಕಲಾವತಿ ಮತ್ತಿತರರು ಹಾಜರಿದ್ದರು.
ಪ್ರಮುಖ ಹಕ್ಕೊತ್ತಾಯಗಳು: ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು. ಎಲ್ಲಾ ನೇಮಕಾತಿಗಳ ವಯೋಮಿತಿಯಲ್ಲಿ ಕನಿಷ್ಠ 5 ವರ್ಷಗಳ ಸಡಿಲಿಕೆ ನೀಡಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಎಲ್ಲಾ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ಕೆಪಿಎಸ್‍ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರಕಾರ ಹೋಟಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಮತ್ತು ಎಲ್ಲ ಹುದ್ದೆಗಳಿಗೂ ಖಾಯಂ ನೇಮಕಾತಿ ಮಾಡಬೇಕು. ದೇಶಾದ್ಯಂತ ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ ಮತ್ತು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಬೇಕು.







