ಕೆಳಮಂಗಲ | ಸಲಿಂಗ ಕಾಮಕ್ಕೆ ಅಡ್ಡಿಯಾದ ಮಗುವನ್ನು ಕೊಂದ ತಾಯಿ

ಆನೇಕಲ್/ ಕೆಳಮಂಗಲ : ಇಬ್ಬರು ಯುವತಿಯರು ತಮ್ಮ ಸಲಿಂಗ ಕಾಮಕ್ಕೆ ಅಡ್ಡಿಯಾದೀತೆಂದು ಮಗುವನ್ನು ಕೊಂದು ಹಾಕಿರುವ ಘಟನೆ ಗಡಿ ತಾಲೂಕು ಕೆಳಮಂಗಲದಲ್ಲಿ ನಡೆದಿರುವುದು ವರದಿಯಾಗಿದೆ. ಈ ಕೃತ್ಯವು ಆರೋಪಿಗಳಿಬ್ಬರ ನಡುವೆ ನಡೆದ ಮೊಬೈಲ್ ಚಾಟ್ ಮೂಲಕ ಬೆಳಕಿಗೆ ಬಂದಿದೆ.
ಚಿನ್ನಟ್ಟಿ ನಿವಾಸಿಗಳಾದ ಭಾರತಿ (26) ಮತ್ತು ಸುಮಿತ್ರಾ (22) ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಭಾರತಿಗೆ ಸುರೇಶ್ ಎಂಬವರೊಂದಿಗೆ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿತ್ತು. ಭಾರತಿ ತನ್ನ ದೇಹದ ಮೇಲೆ ಸುಮಿ ಎಂದು ಹಚ್ಚೆಯನ್ನೂ ಹಾಕಿಸಿಕೊಂಡಿದ್ದಳು.
ಕೊನೆಯ ಮಗು ಧ್ರುವಗೆ ಐದು ತಿಂಗಳಾಗಿದ್ದಾಗ ಸುಮಿತ್ರಾ ಈ ಬಗ್ಗೆ ಭಾರತಿ ಜೊತೆ ಜಗಳವಾಡಿದ್ದಳು. ತನ್ನಿಂದ ಮಗುವಿಗಾಗಿ ದೂರಾಗುತ್ತಿದ್ದೀಯಾ ಎಂದು ದೂರಿದ್ದಳು. ಈ ಮಗುವೇ ನಮ್ಮಿಬ್ಬರನ್ನು ದೂರ ಮಾಡುತ್ತಿದೆ ಎಂದು ಜೋಡಿಗಳು ಮಗುವನ್ನು ಹತ್ಯೆಗೈಯಲು ನಿರ್ಧರಿಸಿದ್ದರು. ಬಳಿಕ ಮಗುವನ್ನು ಭಾರತಿ ಉಸಿರುಗಟ್ಟಿಸಿ ಕೊಲೆಗೈದು, ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪಿದೆ ಎಂದು ಕಥೆ ಕಟ್ಟಿದ್ದಳು. ಬಳಿಕ ಮಗುವಿನ ಅಂತ್ಯಸಂಸ್ಕಾರ ನೆರವೇರಿತ್ತು.
ಇದೇ ವೇಳೆ ಭಾರತಿಯ ಪತಿ ಸುರೇಶ್ ಆಕಸ್ಮಿಕವಾಗಿ ಭಾರತಿಯ ಮೊಬೈಲ್ ಮೆಸೇಜ್ ಗಳನ್ನು ಪರಿಶೀಲಿಸಿದಾಗ ಕೊಲೆಯ ಸಂಚು ಬಯಲಿಗೆ ಬಂದಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವುದಾಗಿ ಸುರೇಶ್ ಬೆದರಿಸಿದಾಗ ಭಾರತಿ ತಾನೇ ಮಗುವನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಳು. ಸುರೇಶ್ ನಂತರ ಎಲ್ಲ ವೀಡಿಯೊ, ಪೋಟೋ, ಮೆಸೇಜ್ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಕೆಳಮಂಗಲ ತಹಶೀಲ್ದಾರ್ ಗಂಗೈ ಅವರ ಸಮ್ಮುಖದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದೆ.







