ಲೇಖಕರಲ್ಲಿ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿದೆ : ಡಾ.ಷರೀಫಾ

ಬೆಂಗಳೂರು : ಎಪ್ಪತ್ತರ ದಶಕದಲ್ಲಿ ಬಂದ ಲೇಖಕಿಯರಲ್ಲಿ ಸಾಮಾಜಿಕ ಬದ್ಧತೆ, ಗೌರವ, ಸಿದ್ಧಾಂತಗಳ ಬಗ್ಗೆ ಅರಿವಿತ್ತು. ಆದರೆ, ಇತ್ತೀಚಿನ ಬರಹಗಾರ್ತಿಯರಲ್ಲಿ ಆ ಸೈದ್ಧಾಂತಿಕ ಬದ್ಧತೆ ಕಡಿಮೆ ಆಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಷರೀಫಾ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಬುದ್ಧ, ಬಸವ , ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ರಾಜ್ಯ ಮಟ್ಟದ 6ನೇ ಮಹಿಳಾ ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಐದು ದಶಕಗಳಿಂದ ಹಲವು ಲೇಖಕಿಯರು ಬರೆಯುತ್ತಿರುವುದನ್ನು ನೋಡಿದರೆ, ಮಹಿಳೆಯರು ತಮ್ಮ ಬರಹದ ಮೂಲಕ ಸಾಂಸ್ಕೃತಿಕ ಮತ್ತು ರಾಜಕಾರಣವನ್ನು ತಮ್ಮ ಕವಿತೆ, ಕಥೆ, ಕಾದಂಬರಿಗಳಲ್ಲಿ ದಾಖಲಿಸುತ್ತಿದ್ದಾರೆ ಎಂದರು.
ಪುರುಷ ಮತ್ತು ಮಹಿಳೆ ಒಳ್ಳೆಯ ಸಂಗಾತಿಗಳಾಗಿ ಸಮಾಜದ ಒಳಿತಿಗಾಗಿ ಇಬ್ಬರೂ ಸೇರಿ ಕೆಲಸ ಮಾಡಿದಾಗ ಸಾಹಿತ್ಯ ಮತ್ತು ಸಮಾನತೆಯು ಇನ್ನಷ್ಟು ಬೆಳೆಯುತ್ತದೆ. ಮಹಿಳಾ ಸಾಹಿತ್ಯ ಎಂದರೆ ಅದು ಅಡುಗೆ ಮನೆ ಸಾಹಿತ್ಯ ಎಂದು ಮೂಗಮುರಿಯುವ ವಿಮರ್ಶಕರಿಗೆ ಇಂದು ಲೇಖಕಿಯರು ಸವಾಲ್ ಎಸೆಯುವಂತೆ ಬರೆಯುತ್ತಿದ್ದಾರೆ. ಉಡಾಫೆ ನಿಲುವನ್ನು ದಾಟಿಕೊಂಡು, ಸ್ತ್ರೀವಾದದ ಚೌಕಟ್ಟನ್ನು ಮುರಿದು, ಲಿಂಗತಾರತಮ್ಯವನ್ನು ಮೀಟೆ ಮಾನವೀಯತೆಯ ನಿಲುವಿನಲ್ಲಿ ಬರೆಯುತ್ತಿದ್ದಾಳೆ ಎಂದು ಷರೀಫಾ ನುಡಿದರು
ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ವಕೀಲ ಕೃಷ್ಣಮೂರ್ತಿ, ಕವಿಯತ್ರಿ ಪುಷ್ಪಾ, ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ ಸೇರಿದಂತೆ ಹಲವರು ಭಾಗವಹಿಸಿದ್ದರು.







