ಬೆಂಗಳೂರು | ಮಹಿಳಾ ಪ್ರಯಾಣಿಕರಿಗೆ ಕಿರುಕುಳ ಆರೋಪ; ಬೈಕ್ ಟ್ಯಾಕ್ಸಿ ಚಾಲಕನ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಬೈಕ್ ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲದ ಮುನಿಯಪ್ಪ ಲೇಔಟ್ ನಿವಾಸಿ ಲೋಕೇಶ್(28) ಎಂದು ಗುರುತಿಸಲಾಗಿದೆ.
ನವೆಂಬರ್ 6ರಂದು ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬೆಂಗಳೂರು ಪೊಲೀಸ್ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ಮಹಿಳೆಯ ಪೋಸ್ಟ್ ಅನ್ನು ಗಮನಿಸಿ ಹೆಚ್ಚಿನ ವಿವರಗಳಿಗಾಗಿ ಆಕೆಯನ್ನು ಸಂಪರ್ಕಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ ಪೊಲೀಸರು ಆರೋಪಿ ಲೋಕೇಶ್ನನ್ನು ಬಂಧಿಸಿದ್ದಾರೆ.
ನವೆಂಬರ್ 6ರ ಸಂಜೆ ವೇಳೆಯಲ್ಲಿ ಮಹಿಳೆಯು ಬೈಕ್-ಟ್ಯಾಕ್ಸಿ ಮೂಲಕ ಬೆಂಗಳೂರಿನ ಚರ್ಚ್ಸ್ಟ್ರೀಟ್ನಿಂದ ತನ್ನ ಪಿ.ಜಿ.(ಪೇಯಿಂಗ್ ಗೆಸ್ಟ್)ಗೆ ಹಿಂತಿರುಗುತ್ತಿದ್ದಾಗ ಚಾಲಕ ಮಹಿಳೆಯ ದೇಹದ ಭಾಗವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಕೂಡಲೇ ಮಹಿಳೆಯು ದ್ವಿಚಕ್ರ ವಾಹನವನ್ನು ನಿಲ್ಲಿಸುವಂತೆ ಹೇಳಿದಾಗ ಆತ ನಿಲ್ಲಿಸಿಲ್ಲ. ಯುವಕ ವರ್ತನೆ ಉದ್ದೇಶಪೂರ್ವಕವಾಗಿತ್ತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಂತ್ರಸ್ತೆಯು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.





