ಬೆಂಗಳೂರು | ಪೊಲೀಸರಿಗೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಗೆ ಗುಂಡೇಟು!

ಸಾಂದರ್ಭಿಕ ಚಿತ್ರ | PC : ANI
ಬೆಂಗಳೂರು : ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಗೆ ಇಲ್ಲಿನ ಹೆಬ್ಬಗೋಡಿ ಠಾಣಾ ಪೆÇಲೀಸರು ಗುಂಡೇಟು ನೀಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ನ.8ರ ರಾತ್ರಿ 10.30ರ ವೇಳೆ ನಡೆದಿದೆ.
ಪೊಲೀಸ್ ಗುಂಡೇಟಿನಿಂದ ಆಂಧ್ರಪ್ರದೇಶ ಮೂಲದ ರವಿಪ್ರಸಾದ್ ರೆಡ್ಡಿ(28) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ ಎಂಬುವರ ಕೊಲೆ ಪ್ರಕರಣದಲ್ಲಿ ರವಿಪ್ರಸಾದ್ ರೆಡ್ಡಿ ಆರೋಪಿಯಾಗಿದ್ದಾರೆ.
ಆರೋಪಿಯನ್ನು ಬಂಧಿಸಿದ್ದ ಹೆಬ್ಬಗೋಡಿ ಪೊಲೀಸರು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದರು. ಇದೇ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ಮೇಲೆ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ತಕ್ಷಣವೇ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗತಿಗೆ ಎಚ್ಚರಿಕೆ ನೀಡಿದರೂ ಕೇಳದಿದ್ದಾಗ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಗುಂಡು ಹಾರಿಸಿದ್ದಾರೆ. ಆರೋಪಿಯ ಕಾಲಿಗೆ ಗುಂಡೇಟು ತಾಕಿದ್ದು, ಬಳಿಕ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು, ಈ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







