ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ | ಯೋಗಗುರು ನಿರಂಜನಾಮೂರ್ತಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು : ಯೋಗ ಕಲಿಯಲು ಬಂದಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನವಾಗಿದ್ದ ಯೋಗ ಗುರು ನಿರಂಜನಾಮೂರ್ತಿ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ದೋಷಾರೋಪ ಪಟ್ಟಿ(ಚಾರ್ಜ್‍ಶೀಟ್) ಸಲ್ಲಿಸಿದ್ದಾರೆ.
ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಇದೀಗ ಪೊಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಆರೋಪಿ ನಿರಂಜನಾ ಮೂರ್ತಿ ರಾಜರಾಜೇಶ್ವರಿನಗರದಲ್ಲಿ ಯೋಗ ಕೇಂದ್ರವೊಂದನ್ನು ನಡೆಸುತ್ತಿದ್ದ. ಅಲ್ಲಿಗೆ ಯೋಗ ಕಲಿಯಲು ಓರ್ವ ಅಪ್ರಾಪ್ತೆ ಹೋಗುತ್ತಿದ್ದಳು. ‘ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದು, ನಿನ್ನ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿನಗೆ ಸರಕಾರಿ ಕೆಲಸವೂ ಸಿಗಬಹುದು’ ಎಂದು ನಂಬಿಸಿ, ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ್ದ ದೂರನ್ನು ಆಧರಿಸಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವರಿನಗರ ಪೊಲೀಸರು ನಿರಂಜನಾ ಮೂರ್ತಿಯನ್ನು ಬಂಧಿಸಿದ್ದರು.
ತನಿಖೆ ವೇಳೆ, ಅಪ್ತಾಪ್ರೆ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಕೆಲ ವಿಡಿಯೋ, ಫೋಟೋಗಳು ಲಭ್ಯವಾಗಿದೆ. ಅಲ್ಲದೇ ಹಲವಾರು ಮಹಿಳೆಯರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರುವುದೂ ಬೆಳಕಿಗೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.





