ಪ್ರೊ.ಬರಗೂರು ರಾಮಚಂದ್ರಪ್ಪ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡವರಲ್ಲ: ಸಲೀಂ ಅಹ್ಮದ್

ಬೆಂಗಳೂರು : ‘ಹಿರಿಯ ಸಾಹಿತಿ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಎಂದರೆ ಬರೀ ವ್ಯಕ್ತಿ ಅಲ್ಲ,. ಒಂದು ವಿಚಾರಧಾರೆ. ಜೀವನದಲ್ಲಿ ಅವರು ನಂಬಿದ ಸಿದ್ಧಾಂತದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ’ ಎಂದು ವಿಧಾನ ಪರಿಷತ್‍ನ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ನಾಡೋಜ ಬರಗೂರು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ನಾಡೋಜ ಬರಗೂರು ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಇದ್ದಾಗ ವಿಧಾನ ಪರಿಷತ್ ಸದಸ್ಯ ಆಗಬೇಕೆಂದು ಕೇಳಲಾಗಿತ್ತು. ಆದರೆ, ಬರಗೂರು ರಾಮಚದ್ರಪ್ಪ ಅವರು ಒಪ್ಪಲಿಲ್ಲ ಎಂದರು.
ನಾನು ವಿದ್ಯಾರ್ಥಿ ನಾಯಕನಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಹೋರಾಟಗಳನ್ನು ಹೇಗೆ ರೂಪಿಸಬೇಕು, ಹೇಗೆ ಭಾಷಣ ಮಾಡಬೇಕು. ಯಾವ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎನ್ನುವ ಕುರಿತು ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಂದ ಅನೇಕ ಸಲಹೆಯನ್ನು ಪಡೆಯುತ್ತಿದ್ದೆ ಎಂದು ಅವರು ಹೇಳಿದರು.
ಬರಗೂರು ರಾಮಚಂದ್ರಪ್ಪ ಅವರು ಯಾವತ್ತೂ ಅಧಿಕಾರದ ಹಿಂದೆ ಬಿದ್ದವರಲ್ಲ. ಸರಕಾರ ಕೂಡ ಅವರಿಂದ ಅನೇಕ ಸಲಹೆಗಳನ್ನು ಪಡೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಮಾತನಾಡಿ, ಕನ್ನಡ ಸಂಸ್ಕೃತಿ ಇಲಾಖೆ ಈಗ ತುಂಬಾ ಬೆಳೆದಿದೆ. ಅನೇಕ ರಂಗಾಯಣ, ಪ್ರಾಧಿಕಾರ, ಪ್ರತಿಷ್ಠಾನಗಳು ರಚನೆಯಾಗಿವೆ. ಸರಕಾರದ ಪ್ರತಿಷ್ಠಾನಗಳ ಗುರಿ ಏನು? ಗುರಿ ತಲುಪಲು ಕೆಲಸ ಮಾಡುತ್ತಿವೆಯಾ? ಎಂದು ಯೋಚಿಸಿದರೇ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಎಲ್ಲ ಪ್ರಾಧಿಕಾರಗಳು ಈ ಸಂದರ್ಭಕ್ಕೆ ಬೇಕಾ? ಬೇಡ್ವಾ ಎನ್ನುವುದನ್ನು ವಿಶ್ಲೇಷಣೆ ಮಾಡಿ, ಬಿಡುಗಡೆ ಮಾಡುವುದು ಉತ್ತಮ. ಕನ್ನಡ ಸಂಸ್ಕೃತಿ ಇಲಾಖೆಯವರಿಗೆ ಪ್ರಾಧಿಕಾರಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದೇ ಕಷ್ಟವಾಗಿದೆ. ಅಷ್ಟೊಂದು ಪ್ರಾಧಿಕಾರಗಳಿವೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹಾಗೂ ಚಲನಚಿತ್ರ ನಿರ್ದೇಶಕ ಶಿವರುದ್ರಯ್ಯ ಅವರಿಗೆ ನಾಡೋಜ ಬರಗೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ನಾಡೋಜ ಬರಗೂರು ಪ್ರತಿಷ್ಠಾನದ ಅಧ್ಯಕ್ಷ ರಾಜಪ್ಪ ದಳವಾಯಿ, ಉಪಾಧ್ಯಕ್ಷ ಮೈತ್ರಿ ಬರಗೂರು, ಪ್ರದಾನ ಕಾರ್ಯದರ್ಶಿ ಸುಂದರ ರಾಜ್ ಅರಸ್, ಕಾರ್ಯದರ್ಶಿ ಡಾ.ಎ.ವಿ.ಲಕ್ಷ್ಮೀನಾರಾಯಣ, ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







