ಕಲಾಗ್ರಾಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ

ಬೆಂಗಳೂರು : ಇಲ್ಲಿನ ಜ್ಞಾನಭಾರತಿಯ ಕಲಾಗ್ರಾಮದ ಆವರಣದಲ್ಲಿರುವ ಕವಿ ಡಾ.ಸಿದ್ದಲಿಂಗಯ್ಯ ಅವರ ಸಮಾಧಿ ಪಕ್ಕದಲ್ಲೇ ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು.
ರಾಜ್ಯ ಸರಕಾರದ ಆದೇಶದಂತೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತಿನ ಕುಶಲತೋಪು ಸಿಡಿಸಿ, ಸಕಲ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅವರ ದತ್ತುಪುತ್ರ ಉಮೇಶ್ ಅವರಿಂದ ಅಂತಿಮ ವಿಧಿ-ವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಾಲುಮರದ ತಿಮ್ಮಕ್ಕ ಶುಕ್ರವಾರದಂದು ಇಲ್ಲಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಶನಿವಾರ ಬೆಳಗ್ಗೆ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ವಿಪಕ್ಷ ನಾಯಕ ಆರ್. ಅಶೋಕ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಸೇರಿದಂತೆ ಹಲವರು ತಿಮ್ಮಕ್ಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಎಲ್ಲರ ಅಚ್ಚುಮೆಚ್ಚಿನ ತಾಯಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ನೋವಾಗಿದೆ. ಅವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದವರು. ಯಾರು ನಡೆಯದ ದಾರಿಯನ್ನು ಅವರು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು ಕೃತಿಯಲ್ಲಿ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ‘ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿ ನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ. 114 ವರ್ಷ ಜೀವಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ 13 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು’ ಎಂದರು.







