ಸಾಂಸ್ಕೃತಿಕ ಜಗತ್ತಿನ ನಿರ್ಮಾಣಕ್ಕೆ ಒತ್ತು ನೀಡಬೇಕು : ವೀರಪ್ಪ ಮೊಯ್ಲಿ

ಬೆಂಗಳೂರು : ಪರಸ್ಪರ ದ್ವೇಷ ಕಾರುವ ಈ ದಿನಗಳಲ್ಲಿ ಹೃದಯ ಬೆಸೆಯುವ ಸಾಂಸ್ಕೃತಿಕ ಜಗತ್ತಿನ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ 6ನೆ ದಿನದ ಸಂತವಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನ ಹಾಗೂ ಸಾಮಾಜಿಕ ಪೋಷಣೆಯ ಚಿಂತನೆಗಳು ಆಗಬೇಕು. ಈ ಮೂಲಕ ಎಲ್ಲ ಬಗೆಯ ಚಿಂತನೆಗಳನ್ನು ಆಹ್ವಾನಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಹೃದಯ ಬೆಸೆಯುವ ಸಂಸ್ಕೃತಿ ಕ್ಷೀಣಿಸುತ್ತಿದೆ. ಒಬ್ಬರ ಮೇಲೊಬ್ಬರು ದ್ವೇಷ ಸಾಧಿಸುವುದು, ದೇಶ-ದೇಶಗಳ ನಡುವೆ ದ್ವೇಷ ಹರಡುವಿಕೆ ನಡೆಯುತ್ತಿದೆ ಎಂದರು.
ಆತ್ಮೀಯತೆ, ಸರಳತೆ ಹಾಗೂ ಪ್ರಾಮಾಣಿಕತೆ ದಾರಿಯಲ್ಲಿ ಸಾಗುವ ಮೂಲಕ ಸಾಂಸ್ಕೃತಿಕ ಜಗತ್ತನ್ನು ಸ್ಥಾಪಿಸಬೇಕಿದೆ. ವಿಶ್ವ ಸಂಸ್ಕೃತಿಯಲ್ಲಿ ದ್ವೇಷವೇ ಇಲ್ಲ. ಈ ಪರಿಕಲ್ಪನೆಯಲ್ಲಿಯೇ ನಾನು ʼವಿಶ್ವ ಸಂಸ್ಕೃತಿ ಮಹಾಯನʼ ಎಂಬ ಮಹಾ ಕಾವ್ಯವನ್ನು ಬರೆದಿರುವುದು. ಮೃದುತ್ವಕ್ಕೆ ಮಹಾನ್ ಶಕ್ತಿಯನ್ನೂ ಗೆಲ್ಲುವ ಶಕ್ತಿಯಿದೆ. ಆದುದರಿಂದ ಎಲ್ಲರೂ ಮೃದುತ್ವವನ್ನು ಬೆಳೆಸಿಕೊಳ್ಳಬೇಕು. ಧನಗಳಿಸುವ ದಾಹದ ಹಿಂದೆ ಬಿದ್ದ ಜನರು ಎಷ್ಟೇ ಸಂಪಾದನೆ ಮಾಡಿದರೂ, ಅತೃಪ್ತ ಜೀವನ ನಡೆಸುತ್ತಿದ್ದಾರೆ. ಇದರಿಂದ ಹೊರಬಂದು ತೃಪ್ತಿ ಜೀವನ ನಡೆಸಬೇಕು. ಚಿಂತನೆಗಳಲ್ಲಿ ಪ್ರಾಮಾಣಿಕತೆ ಹೊಂದಬೇಕು ಮತ್ತು ಸದ್ಗುಣಿಗಳಾಗಬೇಕು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಂತಿಕ ಡಾ.ಆರ್.ಗಣೇಶ್, ಯುನೆಸ್ಕೋದ ಮಾಜಿ ರಾಯಭಾರಿ ಡಾ.ಚಿರಂಜೀವ್ ಸಿಂಗ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್, ನಿರ್ದೇಶಕ ಎಚ್.ಎನ್.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







