ಸಂಘಟಿತ ಅಪರಾಧ ಪ್ರಕರಣಗಳು ಬಾಕಿ ಇಲ್ಲದಿದ್ದರೂ ಕೊಕಾ ಅನ್ವಯ : ಬೈರತಿ ಬಸವರಾಜ್ ವಕೀಲರ ಆಕ್ಷೇಪ

ಬೆಂಗಳೂರು : ಸಂಘಟಿತ ಅಪರಾಧದ ಅಡಿ ಕೊಕಾ ಕಾಯ್ದೆ ಅನ್ವಯಿಸಲು ಕ್ರಿಮಿನಲ್ ಹಿನ್ನೆಲೆ ಇರಬೇಕು. ಆದರೆ, ಅಂತಹ ಪ್ರಕರಣಗಳ ಅನುಪಸ್ಥಿತಿಯಲ್ಲಿ ಕೊಕಾ ಕಾಯ್ದೆ ವಿಧಿಸುವುದು ಕಾನೂನುಬಾಹಿರ ಎಂದು ಶಾಸಕ ಬೈರತಿ ಬಸವರಾಜು ಪರ ಹಿರಿಯ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೊಕಾ ಕಾಯ್ದೆ ಅನ್ವಯಿಸಿರುವುದನ್ನು ಪ್ರಶ್ನಿಸಿ ಮತ್ತು ಕೊಲೆ ಆರೋಪದ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಹಾಗೂ ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.
ಬೈರತಿ ಬಸವರಾಜು ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, ಕೊಕಾ ಕಾಯ್ದೆ ಸೆಕ್ಷನ್ 22(3)ರ ಅಡಿ ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಲು ನಿರ್ಬಂಧವಿದೆ. ಆದ್ದರಿಂದ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಕೊಕಾ ಕಾಯ್ದೆ ಅನ್ವಯಿಸಿರುವುದು ಸರಿಯೋ, ತಪ್ಪೋ ಎನ್ನುವ ಪ್ರಶ್ನೆಯೂ ಇದೆ. ರಿಟ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದರೂ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ರಕ್ಷಣೆ ಒದಗಿಸಬಹುದು. ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಅದು ಜಾರಿಯಲ್ಲಿರಲಿದೆ ಎಂದರು.
ತನಿಖೆಗೆ ಸಹಕರಿಸುತ್ತಿಲ್ಲ ಅಥವಾ ಪ್ರಾಸಿಕ್ಯೂಷನ್‌ಗೆ ಪೂರಕವಾಗಿ ಹೇಳಿಕೆ ನೀಡುತ್ತಿಲ್ಲ ಎಂದು ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಲಾಗದು. ಕೊಕಾ ಕಾಯ್ದೆ ಅನ್ವಯಿಸಿರುವ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದರೆ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕೊಕಾ ಅನ್ವಯಿಸಿರುವುದಕ್ಕೆ ಬಾಕಿ 6 ಎಫ್‌ಐಆರ್‌ಗಳಿವೆ ಎಂದು ಹೇಳಿರುವ ಪ್ರಾಸಿಕ್ಯೂಷನ್, ಈ ಪೈಕಿ ಮೂರು ಆಸ್ತಿ ವಿವಾದಕ್ಕೆ ಸಂಬಂಧಿಸಿವೆ ಎಂದು ಹೇಳಿದೆ. ಆದರೆ, ಯಾವುದೇ ಎಫ್‌ಐಆರ್ ಆಸ್ತಿ ವಿವಾದಕ್ಕೆ ಸಂಬಂಧಿಸಿಲ್ಲ. ಸಂಘಟಿತ ಅಪರಾಧ ಸಿಂಡಿಕೇಟ್ ಆರೋಪದ ಅಡಿ 3 ವರ್ಷ ಶಿಕ್ಷೆ ವಿಧಿಸಬಹುದಾದ ಎರಡು ಪ್ರಕರಣಗಳು ಬಾಕಿ ಇದ್ದಾಗ ಕೊಕಾ ಅನ್ವಯಿಸಬಹುದು. ಈ ಪ್ರಕರಣದಲ್ಲಿ ಒಂದೇ ಒಂದು ಪ್ರಕರಣ ಇರುವುದರಿಂದ ಕೊಕಾ ಅನ್ವಯಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
ಸಿಐಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಬೈರತಿ ಬಸವರಾಜು ಅವರು 2025ರ ಸೆಪ್ಟೆಂಬರ್ 9ರಂದು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿರುವ ಹೇಳಿಕೆಯನ್ನು ಪರಿಶೀಲಿಸಬಹುದು. ಬೈರತಿ ಬಸವರಾಜು ಅವರ ಉದ್ಯಮ ಪಾಲುದಾರರ ಹೇಳಿಕೆಯನ್ನು ದಾಖಲಿಸಲಾಗಿದೆ. ಇದೆಲ್ಲವನ್ನೂ ನ್ಯಾಯಾಲಯ ನೋಡಬಹುದು ಎಂದರು.
ಬೈರತಿ ಬಸವರಾಜು ಅವರು ಉತ್ತರ ಪ್ರದೇಶದಲ್ಲಿ ನಡೆದಿದ್ದ ಕುಂಭಮೇಳಕ್ಕೆ ತೆರಳಿದ್ದರು. ಅವರ ಜತೆ ಇತರ ಆರೋಪಿಗಳೂ ಹೋಗಿದ್ದರು. ಇದಕ್ಕೆ ಪೂರಕವಾದ ವಿಮಾನ ಪ್ರಯಾಣದ ಟಿಕೆಟ್ ಇವೆ. ಒಟ್ಟಿಗೆ ಜನ್ಮದಿನ ಆಚರಿಸಿರುವ ಚಿತ್ರಗಳಿವೆ. ಆದರೆ, ಅವರಾರೂ ನನಗೆ ಗೊತ್ತಿಲ್ಲ ಎಂದು ಬಸವರಾಜು ತಿಳಿಸಿದ್ದಾರೆ. ಬಿಕ್ಲು ಶಿವ ಕೊಲೆ ಪ್ರಕರಣದ ಮೊದಲನೇ ಆರೋಪಿ ವಿದೇಶಕ್ಕೆ ಹೋಗಿದ್ದು, ಮೊಬೈಲ್ ನಾಶಪಡಿಸಿದ್ದಾರೆ. ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿ, ಆತನನ್ನು ಶ್ರೀಲಂಕಾದಲ್ಲಿ ಬಂಧಿಸಲಾಗಿದೆ. ಆತನ ಜತೆ ಹೋಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಇದುವರೆಗೆ ಪತ್ತೆ ಮಾಡಲಾಗಿಲ್ಲ ಎಂದರು.
ಬೈರತಿ ಬಸವರಾಜು ಅವರು ಇಡೀ ತನಿಖೆಯನ್ನು ಹಾದಿ ತಪ್ಪಿಸಿದ್ದಾರೆ. ಅವರನ್ನು ಕಸ್ಟಡಿಗೆ ಪಡೆಯದೇ ತನಿಖೆ ಮುಂದುವರಿಸಲಾಗದು. ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್ ಪರಿಗಣಿಸಲು ಅವಕಾಶವಿಲ್ಲ. ಬೈರತಿ ಬಸವರಾಜು ಅವರು ತನಿಖೆಗೆ ಹಿಂದೆಯೂ ಸಹಕರಿಸಿಲ್ಲ. ಆದ್ದರಿಂದ, ಬೈರತಿ ಬಸವರಾಜು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಎಫ್‌ಐಆರ್ ಪ್ರಶ್ನಿಸಿರುವ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.







