ಬೆಂಗಳೂರಿಗೆ ಜರ್ಮನಿಯ ಬವೇರಿಯಾ ಪಾರ್ಲಿಮೆಂಟ್ ಸಭಾಧ್ಯಕ್ಷರ ನೇತೃತ್ವದ ನಿಯೋಗದ ಭೇಟಿ

ಬೆಂಗಳೂರು : ಜರ್ಮನಿ ದೇಶದ ಬವೇರಿಯಾ ರಾಜ್ಯದ ಪಾರ್ಲಿಮೆಂಟಿನ ಸಭಾಧ್ಯಕ್ಷರಾದ ಇಲ್ಸೆ ಐಗ್ನರ್ ಅವರ ನೇತೃತ್ವದ ನಿಯೋಗವು ಸೋಮವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಸೌಜನ್ಯಯುತ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಿನಿ ರಜನೀಶ್, ಉತ್ತಮ ಸಂಸದೀಯ ವ್ಯವಸ್ಥೆ ಹಾಗೂ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವು ಎರಡು ವರ್ಷಗಳ ಹಿಂದೆ ಜಾರಿಗೆ ತಂದಿರುವ ‘ಗ್ಯಾರಂಟಿ’ ಯೋಜನೆಗಳಿಂದ ಆಗಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ವಿವರಿಸಿದರು.
ಸಮಾನತೆ ಪ್ರಜಾಪ್ರಭುತ್ವದ ಜೀವಾಳ: ಭಾರತ ಮತ್ತು ಜರ್ಮನಿ ಎರಡೂ ಪ್ರಜಾಪ್ರಭುತ್ವ ರಾಷ್ಟ್ರ ಗಳಾಗಿವೆ. ಸಮಾನತೆಯು ಪ್ರಜಾಪ್ರಭುತ್ವದ ಜೀವಾಳವಾಗಿದೆ. ಬಡವರಿಗೆ ಎಲ್ಲ ಮೂಲಸೌಲಭ್ಯ ಒದಗಿಸುವ ಮೂಲಕ ಘನತೆಯ ಬದುಕು ಕಲ್ಪಿಸುವುದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಆಶಯವಾಗಿದೆ ಎಂದು ಶಾಲಿನಿ ರಜನೀಶ್ ಹೇಳಿದರು.
ಜರ್ಮನಿ ದೇಶದ ಬವೇರಿಯಾ ರಾಜ್ಯದ ಸಂಸತ್ತಿನ ಸಭಾಧ್ಯಕ್ಷರಾದ ಇಲ್ಸೆ ಐಗ್ನರ್ ಅವರ ನೇತೃತ್ವದ ಹದಿನಾಲ್ಕು ಜನರ ನಿಯೋಗದ ಸದಸ್ಯರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.







