ಎಸ್‍ಐಆರ್ ಹೆಸರಿನಲ್ಲಿ ರಕ್ತರಹಿತ ಜನಾಂಗೀಯ ಹತ್ಯೆ ಮಾಡಲಾಗುತ್ತಿದೆ : ಪರಕಾಲ ಪ್ರಭಾಕರ್

ಬೆಂಗಳೂರು : ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ' (ಎಸ್‍ಐಆರ್) ಅನ್ನು ಅನುಷ್ಠಾನ ಮಾಡಿದ್ದು, ಎಸ್‍ಐಆರ್ ಹೆಸರಿನಲ್ಲಿ ದೇಶದ ಜನರ ಮತದ ಹಕ್ಕನ್ನು ಕಸಿದುಕೊಂಡು ರಕ್ತರಹಿತ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್ ಆರೋಪಿಸಿದ್ದಾರೆ.
ಸೋಮವಾರ ಇಲ್ಲಿನ ಗಾಂಧಿಭವನದಲ್ಲಿ ‘ಎದ್ದೇಳು ಕರ್ನಾಟಕ’ ವತಿಯಿಂದ ಆಯೋಜಿಸಿದ್ದ ‘ಚುನಾವಣಾ ಆಯೋಗ ದೇಶವ್ಯಾಪಿ ಮಾಡಲು ಹೊರಟಿರುವ ಎಸ್‍ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ-ಮಂಥನಾ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಸ್‍ಐಆರ್ ಮೂಲಕ ಸುಮಾರು 42 ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಹಕ್ಕಿಲ್ಲದವರು ಜೀವಂತ ನಾಗರಿಕರಲ್ಲ, ಹೀಗಾಗಿ ಇದು ನರಮೇಧವಾಗಿದೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವದ ಮೂಲತತ್ವವೇ ತಲೆಕೆಳಗಾಗಿರುವ ಸ್ಥಿತಿ ನಿಮಾಣವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದಲ್ಲಿ ಜನರು ಸರಕಾರವನ್ನು ಆಯ್ಕೆ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ಈಗ ಸರಕಾರವೇ ಎಸ್‍ಐಆರ್ ಮೂಲಕ ಮತದಾರರನ್ನು ಆಯ್ಕೆ ಮಾಡುತ್ತಿದೆ. ತನ್ನ ಪರವಾಗಿ ಮತ ಹಾಕುವವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿ, ವಿರೋಧಿಗಳನ್ನು ಹೊರದೂಡುವ ಕೆಲಸ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ಬಿಹಾರದಲ್ಲಿ ಸರಕಾರ ತನ್ನ ಇಷ್ಟದ ಮತದಾರರನ್ನು ಆಯ್ಕೆ ಮಾಡುತ್ತಿದ್ದರೂ, ಕೆಲವು ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳು ಗೆಲ್ಲುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಇಂದು ಎಸ್‍ಐಆರ್ ಹೆಸರಿನಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಇದನ್ನು ತಡೆಯದಿದ್ದರೆ 21ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ಕಳೆದುಹೋಗುವ ಪರಿಸ್ಥಿತಿ ಎದುರಾಗಬಹುದು. ನಾವು ಸಂವಿಧಾನದ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಪರಕಾಲ ಪ್ರಭಾಕರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಹಾಗೂ ರಾಜಕೀಯ ವಿಶ್ಲೇಷಕ ಶಿವಸುಂದರ್, ಓಬಾಮ ಆಡಳಿತದ ಸಲಹೆಗಾರ ಹಾಗೂ ತಾಂತ್ರಿಕ ಸುರಕ್ಷಣಾ ತಜ್ಞ ಮಾಧವ ದೇಶಪಾಂಡೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ನ ಮುಖ್ಯಸ್ಥ ಹರೀಶ್ ನರಸಪ್ಪ, ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾ ರಾವ್, ನಮ್ಮ ಓಟು, ನಮ್ಮ ಹಕ್ಕು ಅಭಿಯಾನದ ಮಾನವಿ, ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತುಂಬಿದ ನ್ಯಾಯಾಲಯದಲ್ಲಿ ಭಾರತದ ಮುಖ್ಯನ್ಯಾಯಮೂರ್ತಿಗೆ ಚಪ್ಪಲಿ ಎಸೆದಾಗ 140 ಕೋಟಿ ಜನರಲ್ಲಿ ಎಷ್ಟು ಮಂದಿ ರಸ್ತೆಗಿಳಿದಿದ್ದರು? ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ, ಎಷ್ಟು ಮಂದಿ ಪ್ರತಿರೋಧ ಮಾಡುತ್ತಿದ್ದಾರೆ? ದೇಶದಲ್ಲಿ ಯುವಕರ ನಿರುದ್ಯೋಗ ಗರಿಷ್ಠ ಮಟ್ಟ ತಲುಪಿದೆ, ಮನೆಮನೆಗಳ ಸಾಲ ಗಗನಕ್ಕೇರಿದೆ, ಕುಟುಂಬಗಳ ಉಳಿತಾಯ ಕುಸಿಯುತ್ತಿಯುತ್ತಿದೆ, ಆದರೂ ದೇಶದ ಜನರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಏನು ಮಾಡಿದರೂ, ದೇಶದ ಜನರು ಪ್ರತಿಭಟಿಸುವುದಿಲ್ಲ ಎಂದು ಸರಕಾರಕ್ಕೆ ತಿಳಿದಿದೆ. ಜನರ ಈ ಜಡತ್ವವೇ ಆಡಳಿತ ವರ್ಗಕ್ಕೆ ಸಿಕ್ಕಿರುವ ಅವಕಾಶ.
-ಪರಕಾಲ ಪ್ರಭಾಕರ್, ರಾಜಕೀಯ ವಿಶ್ಲೇಷಕ







