'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ ಇಂದಿನಿಂದ ಆರಂಭ : ಡಾ.ಮುಹಮ್ಮದ್ ಸಾದ್ ಬೆಳಗಾಮಿ

ಬೆಂಗಳೂರು : ಸಮಾಜದ ಮುಂದೆ ನೆರ ಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ನ.21ರಿಂದ 30ರವರೆಗೆ ಹಮ್ಮಿಕೊಂಡಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ತಿಳಿಸಿದ್ದಾರೆ.
ಗುರುವಾರ ನಗರದ ಕ್ಲೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯುವಂತೆ ಮಾಡುವುದು ಹಾಗೂ ದಾರಿಹೋಕರು, ಸಹೋದ್ಯೋಗಿಗಳು, ಪ್ರಯಾಣಿಕರು, ರಸ್ತೆಯ ನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದು ಸಹಿತ ಅನೇಕ ಉದ್ದೇಶಗಳನ್ನು ಈ ಅಭಿಯಾನ ಹೊಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮ್ರಿ, ಮೌಲಾನಾ ವಹೀದುದ್ದೀನ್ ಖಾನ್ ಉಮ್ರಿ ಮದನಿ, ಮೌಲಾನಾ ಲಬೀದ್ ಶಾಫಿ, ಮೌಲಾನಾ ಯೂಸುಫ್ ಕನ್ನಿ, ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ಉಪಸ್ಥಿತರಿದ್ದರು.





