ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ : ಶುಭಾಂಶು ಶುಕ್ಲಾ

ಬೆಂಗಳೂರು : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ನನ್ನ ರೀತಿ ಗಗನಯಾನಿ ಆಗಬಹುದು ಎಂದು ಗಗನಯಾನಿ ಶುಭಾಂಶು ಶುಕ್ಲಾ ತಿಳಿಸಿದರು.
ಮಂಗಳವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸರಕಾರಿ ಹಾಗೂ ಖಾಸಗಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಗಗನಯಾನಿ ರಾಕೇಶ್ ಶರ್ಮಾ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ನಾನು 20 ದಿನಗಳ ಯಾತ್ರೆಗೆ 5 ವರ್ಷಗಳ ತರಬೇತಿ ಪಡೆದಿದ್ದೇನೆ ಎಂದು ಶುಭಾಂಶು ಶುಕ್ಲಾ ತಿಳಿಸಿದರು.
`ಗಗನಯಾನ ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಹೊಸ ವಾತಾವರಣಕ್ಕೆ ಹೊಂದುಕೊಳ್ಳುವುದು ತೀರಾ ಕಷ್ಟ. ಬಾಹ್ಯಾಕಾಶಕ್ಕೆ ಹೋದ ಮೇಲೆ ನಾನು ಗಾಳಿಯಲ್ಲಿ ತೇಲಾಡುವುದು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಭೂಮಿಗೆ ಬರುವಾಗ ತುಂಬಾ ಕಷ್ಟವಾಗಿತ್ತು ಅವರು ತಿಳಿಸಿದರು.
ಜಿಫೋರ್ಸ್ ಪ್ರಭಾವ: ಅಮೆರಿಕದ ಸ್ಪೇಸ್ ಎಕ್ಸ್ ನ ಬಾಹ್ಯಾಕಾಶ ಯೋಜನೆಯು ಕ್ರೂ ಡ್ರ್ಯಾಗನ್ ಅನ್ನು ಕೇವಲ ಟಚ್ ಸ್ಕ್ರೀನ್ ನಲ್ಲಿ ನಿಯಂತ್ರಿಸಬಹುದು. ಬಾಹ್ಯಕಾಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ, 18-20 ಜಿಫೋರ್ಸ್ ಮೈ ಮೇಲೆ ಬೀಳುತ್ತದೆ ಎಂದು ಶುಭಾಂಶು ಶುಕ್ಲಾ ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ರಾಜ್ಯದ ಗ್ರಾಮೀಣ ಪ್ರದೇಶದ ಒಂದು ಮಗು ರಾತ್ರಿ ಆಕಾಶವನ್ನು ನೋಡಿದಾಗ, ಅದು ಮುಂದಿನ ಕಲ್ಪನಾ ಚಾವ್ಲಾ, ಮುಂದಿನ ಸುನಿತಾ ವಿಲಿಯಮ್ಸ್ ಅಥವಾ ಮುಂದಿನ ಶುಭಾಂಶು ಶುಕ್ಲಾ ಆಗುವ ಕನಸು ಕಾಣಬೇಕು. ಆ ಕನಸಿಗೆ ಸರಿಯಾದ ಬೆಂಬಲ ದೊರೆಯುವಂತೆ ಮಾಡುವುದು ಸರಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಟೆಲಿಸ್ಕೋಪ್ ಯೋಜನೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳಿಗೆ 833 ಟೆಲಿಸ್ಕೋಪ್‍ಗಳನ್ನು ವಿತರಣೆ ಮಾಡಲಾಗಿದೆ. ಶಿಕ್ಷಕರಿಗಾಗಿ ಖಗೋಳಶಾಸ್ತ್ರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಅಲ್ಲದೇ, ಜವಾಹರಲಾಲ್ ನೆಹರು ತಾರಾಲಯ ಮತ್ತು ಭಾರತೀಯ ಖಗೋಳಶಾಸ್ತ್ರ ಸಂಸ್ಥೆಯೊಂದಿಗೆ ಸಂಯುಕ್ತವಾಗಿ ತಯಾರಿಸಲಾದ ಖಗೋಳಶಾಸ್ತ್ರೀಯ ಘಟನೆಗಳ ಶೈಕ್ಷಣಿಕ ದಿನಚರಿಯನ್ನು ಸರಕಾರಿ ಶಾಲೆಗಳಲ್ಲಿ ಜಾರಿಗೆ ತರಲಿದೆ ಎಂದು ಭೋಸರಾಜು ಹೇಳಿದರು.
‘ನೆಹರು ಸ್ಟ್ರೀಮ್ ಲ್ಯಾಬ್ಸ್’ ಅನ್ನು ಪ್ರಾರಂಭಿಸುತ್ತಿದ್ದೇವೆ. ಇದರಿಂದ ಮಕ್ಕಳಿಗೆ ಪ್ರಾಯೋಗಿಕ ಕಲಿಕೆಯ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಈ ಉಪಕ್ರಮಗಳ ಮೂಲಕ, ನಾವು ನಮ್ಮ ವಿದ್ಯಾರ್ಥಿಗಳನ್ನು ವಿಜ್ಞಾನ, ಆವಿಷ್ಕಾರ ಮತ್ತು ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಮಾತನಾಡಿ, `ನಮ್ಮ ಮಕ್ಕಳನ್ನು ನಿಮ್ಮಂತೆಯೆ ರೂಪಿಸಲು ನಾವು ಸಿದ್ಧರಾಗಿದ್ದೇವೆ. ಇದಕ್ಕಾಗಿ ನಾವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದೇವೆ. ಸರಕಾರಿ ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್‍ಗಳನ್ನು ನೀಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಕನಸು ಕಾಣುವುದಕ್ಕೆ ಯಾವುದೆ ಮಿತಿ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಈ ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಉಪಸ್ಥಿತರಿದ್ದರು.







