ಮಾಹಿತಿ ನೀಡಿದ ಅಧಿಕಾರಿಗಳಿಗೆ ದಂಡ ವಿಧಿಸಿದ ‘ಮಾಹಿತಿ ಆಯೋಗ’

ಸಾಂದರ್ಭಿಕ ಚಿತ್ರ
ಬೆಂಗಳೂರು : ಮಾಹಿತಿ ಕೋರಿದ ಅರ್ಜಿದಾರರಿಗೆ ನಿಗಧಿತ ಅವಧಿಯಲ್ಲಿ ಮಾಹಿತಿ ಒದಗಿಸದೇ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ಬೆಂಗಳೂರಿನ ಇಬ್ಬರು ಉಪವಿಭಾಗಾಧಿಕಾರಿಗಳಿಗೆ ಮತ್ತು ಇಬ್ಬರು ತಹಶೀಲ್ದಾರ್ಗಳಿಗೆ ಮಾಹಿತಿ ಆಯೋಗವು ತಲಾ 25ಸಾವಿರ ರೂ.ಗಳ ದಂಡ ವಿಧಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಆಯೋಗದ ವಿಚಾರಣೆಗೆ ಸತತವಾಗಿ ಗೈರುಹಾಜರಾಗಿದ್ದಲ್ಲದೇ ಮಾಹಿತಿ ಕೋರಿದ ಅರ್ಜಿದಾರರ ಕೋರಿಕೆಗೆ ಸ್ಪಂದಿಸದೇ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂ.ಗಳ ದಂಡ ವಿಧಿಸಿದೆ. ಒಂದು ಪ್ರಕರಣದಲ್ಲಿ ಉಪವಿಭಾಗಾಧಿಕಾರಿ ವಿರುದ್ಧ ಇಲಾಖೆಯ ನಿಯಮಾವಳಿಗಳಂತೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್ ಅವರಿಗೂ ಪ್ರಕರಣವೊಂದರಲ್ಲಿ 25 ರೂ.ಗಳ ದಂಡ ವಿಧಿಸಿದ್ದಲ್ಲದೇ, ಇಲಾಖೆ ವಿಚಾರಣೆಗೆ ಶಿಫಾರಸ್ಸು ಮಾಡುವುದಾಗಿ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಆಯೋಗದ ವಿಚಾರಣೆಗೆ ಸತತವಾಗಿ ಗೈರಾಗಿದ್ದಲ್ಲದೇ, ಅರ್ಜಿದಾರರಿಗೆ ಮಾಹಿತಿ ಒದಗಿಸದ ಕೆ.ಆರ್.ಪುರಂ ತಹಶೀಲ್ದಾರ್ ರಾಜುಗೆ 25ಸಾವಿರ ರೂ.ಗಳ ದಂಡ ವಿಧಿಸಿ, ಆಯೋಗ ಶೋಕಾಸ್ ನೋಟಿಸ್ ನೀಡಿದೆ. ದೇವನಹಳ್ಳಿ ತಾಲೂಕಿನ ರೈತರೊಬ್ಬರು ಸರಕಾರಿ ಶಾಲೆ ಜಮೀನನ್ನು ಉಳಿಸಲು ಕಂದಾಯ ಇಲಾಖೆಯ ದಾಖಲೆಗಳನ್ನು ಕೋರಿ ಸಲ್ಲಿಸಿದ ಅರ್ಜಿಗೆ ನಿರ್ಲಕ್ಷ್ಯವಹಿಸಿದ ದೇವನಹಳ್ಳಿ ತಹಶೀಲ್ದಾರ್ ಅನೀಲ್ ಅವರಿಗೂ 25ಸಾವಿರ ರೂ.ಗಳ ದಂಡ ವಿಧಿಸಿ, ಆಯೋಗ ಶೋಕಾಸ್ ನೋಟಿಸ್ ಜಾರಿಮಾಡಿದೆ.







