ಇಂದಿನಿಂದ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಸರಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ಮತ್ತು ಪೂರಕ ಪೌಷ್ಠಿಕ ಆಹಾರವಾದ ಮೊಟ್ಟೆ/ಬಾಳೆಹಣ್ಣನ್ನು ನೀಡುವ ಕಾರ್ಯಕ್ರಮವನ್ನು ಡಿ.1ರಿಂದ ಆರಂಭಿಸಬೇಕು ಎಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
ಕೆಪಿಎಸ್, ಪಿಎಂಶ್ರೀ, ಮ್ಯಾಗ್ನೇಟ್ ಶಾಲೆಗಳು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರಾರಂಭಿಸಲಾಗಿರುವ ಶಾಲೆಗಳು ಸೇರಿದಂತೆ 2018ರಿಂದ ಪ್ರಾರಂಭವಾಗಿರುವ ಎಲ್ಲ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ವಾರದ ಆರು ದಿನ ಪೂರಕ ಪೌಷ್ಠಿಕಾಂಶವನ್ನು ನೀಡಬೇಕು. ಕೆಪಿಎಸ್ ಶಾಲೆಗಳಲ್ಲಿ ಈವರೆಗೆ ನೀಡುತ್ತಿದ್ದ ಬೆಳಗ್ಗಿನ ಉಪಹಾರವನ್ನು ರದ್ದುಪಡಿಸಿ, ಪೂರಕ ಪೌಷ್ಠಿಕ ಆಹಾರವನ್ನು ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಎಲ್ಲ ಸರಕು ಮತ್ತು ಸೇವೆಗಳ ಖರೀದಿ ಪ್ರಕ್ರಿಯೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರನ್ವಯ ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.





