‘ಸುರಂಗ ರಸ್ತೆ ಯೋಜನೆ ಕೈಬಿಡಿ’: ಜನಸಮಾವೇಶದಲ್ಲಿ ವಿರೋಧ

ಬೆಂಗಳೂರು : ಸುರಂಗ ಕೊರೆಯುವುದರಿಂದ ಜಲಚರಗಳು ಮತ್ತು ಅಂತರ್ಜಲ ಹರಿವು ತೊಂದರೆಗೊಳಗಾಗುವ ಅಪಾಯವಿದೆ. ತೀವ್ರವಾಗಿ ಹೆಚ್ಚುತ್ತಿರುವ ನಗರೀಕರಣ, ಸಸ್ಯವರ್ಗ ಮತ್ತು ಜಲಮೂಲಗಳ ನಾಶ ಮತ್ತು ಅನಿಯಂತ್ರಿತ ಕಾಂಕ್ರೀಟೀಕರಣದಿಂದ ಬೆಂಗಳೂರಿನ ಹವಾಮಾನದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವೈಜ್ಞಾನಿಕ ಅಧಿಕಾರಿ ಡಾ.ಟಿ.ವಿ. ರಾಮಚಂದ್ರ ಎಚ್ಚರಿಸಿದ್ದಾರೆ.
ರವಿವಾರ ನಗರದ ಎಸ್‍ಸಿಎಂ ಹೌಸ್‍ನಲ್ಲಿ ‘ಬೆಂಗಳೂರು ಉಳಿಸಿ ಸಮಿತಿ’ಯು ಸುರಂಗ ರಸ್ತೆಯನ್ನು ವಿರೋಧಿಸಿ ಆಯೋಜಿಸಿದ್ದ ‘ಜನಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುರಂಗ ಕೊರೆಯುವುದರಿಂದ ನಗರದ ನೀರಿನ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ನಗರವು ಪ್ರವಾಹ ಮತ್ತು ಮಳೆಯನ್ನು ಸಹಿಸುವ ಶಕ್ತಿಯನ್ನು ಮೀರಿದೆ ಎಂದರು.
ಬೆಂಗಳೂರು ಉಳಿಸಿ ಸಮಿತಿಯ ಸಂಚಾಲಕ ಡಾ.ಜಿ.ಶಶಿಕುಮಾರ್ ಮಾತನಾಡಿ, ಸುರಂಗ ರಸ್ತೆ ಯೋಜನೆಯು ಅವೈಜ್ಞಾನಿಕವಾದುದಲ್ಲದೇ, ಆರ್ಥಿಕವಾಗಿಯೂ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ದುಷ್ಪರಿಣಾಮವನ್ನು ಬೀರುತ್ತದೆ ಎಂದರು.
ಈ ಯೋಜನಾ ವೆಚ್ಚವು 70ಸಾವಿರ ಕೋಟಿ ರೂ.ಗಳಿಗೆ ಹೆಚ್ಚಾಗಬಹುದು, ಇದರಿಂದಾಗಿ ಮುಂದಿನ 40 ವರ್ಷಗಳ ಕಾಲ ನಾಗರಿಕರು ತೆರಿಗೆ ಮತ್ತು ಟೋಲ್‍ಗಳ ಹೊರೆಯನ್ನು ಹೊರಬೇಕಾಗುತ್ತದೆ, ಈ ಸುರಂಗ ಯೋಜನೆಯಡಿಯಲ್ಲಿ ಗಂಟೆಗೆ ಕೇವಲ 1,800 ಕಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ, ಆದರೆ, ಇನ್ನೊಂದೆಡೆ ಸಾರ್ವಜನಿಕ ಸಾರಿಗೆಗಳಾದ ಮೆಟ್ರೋನಲ್ಲಿ 69,000 ಮತ್ತು ಬಿಎಂಟಿಸಿ ಬಸ್‍ಗಳಲ್ಲಿ 1.75 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ ಎಂದು ಡಾ.ಜಿ.ಶಶಿಕುಮಾರ್ ತಿಳಿಸಿದರು.
ಸಾರಿಗೆ ತಜ್ಞ ಪ್ರೊ.ಆಶೀಶ್ ವರ್ಮಾ ಮಾತನಾಡಿ, ಸುರಂಗ ಯೋಜನೆಯು ಸಾರ್ವಜನಿಕ ಹಣದ ದುವ್ರ್ಯಯ ಮತ್ತು ತಲೆಮಾರುಗಳವರೆಗೆ ನಗರಕ್ಕೆ ಹಾನಿ ಮಾಡುವ ಯೋಜನೆಯಾಗಿದೆ. ಈ ಯೋಜನೆಯು ಖಾಸಗಿ ವಾಹನ ಬಳಕೆಯನ್ನು ಉತ್ತೇಜಿಸುತ್ತದೆ, ಮೆಟ್ರೋ ಮತ್ತು ಉಪನಗರ ರೈಲುಗಳ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಂಗಳೂರಿನ ಸಮಗ್ರ ಚಲನಶೀಲತಾ ಯೋಜನೆಯನ್ನು ದುರ್ಬಲಗೊಳಿಸುತ್ತದೆ. ಇದಲ್ಲದೇ ಈ ಯೋಜನೆಯು ಪ್ರತಿ ಟ್ರಿಪ್‍ಗೆ 300 ರೂ.ವರೆಗೆ ಸುಂಕವನ್ನು ವಿಧಿಸುತ್ತದೆ, ಅಂದರೆ ಶ್ರೀಮಂತರು ಮಾತ್ರ ಉಪಯೋಗಿಸಬಲ್ಲ ಯೋಜನೆಯಾಗುತ್ತದೆ ಎಂದು ಎಚ್ಚರಿಸಿದರು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನ ಪ್ರಾಧ್ಯಾಪಕ ಸಿ.ಪಿ.ರಾಜೇಂದ್ರನ್ ಮಾತನಾಡಿ, ಈ ಯೋಜನೆಯು ಅಡ್ಡಪರಿಣಾಮಗಳನ್ನು ಬೀರುತ್ತದೆಯೇ ಹೊರತು, ಯಾವುದೇ ರೀತಿಯಲ್ಲೂ ಜನೋಪಯುಕ್ತವಲ್ಲದ್ದು. ಇಂತಹ ಯೋಜನೆಗಳು ಸಾಮಾನ್ಯವಾಗಿ ಸ್ಥಳೀಯ ಭೂವಿಜ್ಞಾನ, ಜಲಭೂವಿಜ್ಞಾನ ಮತ್ತು ಭೂಕಂಪನ ಅಪಾಯಗಳನ್ನು ನಿರ್ಲಕ್ಷಿಸುತ್ತವೆ, ಇದು ಬದಲಾಯಿಸಲಾಗದ ಪರಿಸರ ಹಾನಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಸ್ವತಂತ್ರ ನಗರ ಸಾರಿಗೆ ಯೋಜನಾ ತಜ್ಞ ಪ್ರೊ.ಎಂ.ಎನ್.ಶ್ರೀಹರಿ ಮಾತನಾಡಿ, ಈ ಯೋಜನೆಯು ಹೆಚ್ಚಾಗಿ ಖಾಸಗಿ ಕಾರು ಬಳಕೆದಾರರಿಗೆ ಮಾತ್ರ ಪ್ರಯೋಜನಕಾರಿಯಾಗಿದ್ದು, ಸಾಮೂಹಿಕ ಸಾರಿಗೆ ಅಗತ್ಯಗಳನ್ನು ನಿರ್ಲಕ್ಷಿಸುತ್ತದೆ. ಇದರ ಮೇಲಾಗಿ ಸುರಂಗ ಯೋಜನೆಗಳು ಮುಖ್ಯವಾಗಿ ಮುಂಬೈ, ಚೆನ್ನೈನಂತಹ ಕರಾವಳಿ ನಗರಗಳಿಗೆ ಸೂಕ್ತವಾಗುತ್ತದೆ, ಜನಸಾಮಾನ್ಯರ ಪರವಾಗಿಲ್ಲದ ಈ ಅನಗತ್ಯ ಯೋಜನೆಯನ್ನು ಕೈಬಿಟ್ಟು, ಸಾಮೂಹಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ವಿಸ್ತರಿಸುವಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಪ್ರೊ.ರೇಣುಕಾ ಪ್ರಸಾದ್ ಮಾತನಾಡಿ, ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ಒಂದು ಸಮಗ್ರ ಭೂವೈಜ್ಞಾನಿಕ ಸಮೀಕ್ಷೆ ಇಲ್ಲದಿರುವುದು ಆಘಾತಕಾರಿ ಎಂದರು.
ಈ ವೇಳೆ, ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಸಂಧಿವಾತ ತಜ್ಞ ಧರ್ಮಾನಂದ್, ಭೂವಿಜ್ಞಾನ ಪ್ರಾಧ್ಯಾಪಕ ಶ್ರೀನಿವಾಸ್, ವೈದ್ಯೆ ಸುಧಾ ಕಾಮತ್, ಬೆಂಗಳೂರು ಉಳಿಸಿ ಸಮಿತಿ ಸದಸ್ಯ ರಾಜೇಶ್ ಭಟ್ ಮಾತನಾಡಿದರು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು ಹಲವಾರು ಪರಿಸರ ವಿಜ್ಞಾನ, ಭೂವಿಜ್ಞಾನ ಮತ್ತು ನಾಗರಿಕ ಸಮಾಜದ ಪ್ರಮುಖ ತಜ್ಞರು ಭಾಗವಹಿಸಿದ್ದರು.







