‘ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದ ವರೆಗೆ ರಸ್ತೆ ಅಗಲೀಕರಣ’ : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ವಿಷಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಧಾನಸೌಧದಲ್ಲಿ ಸಭೆ ನಡೆಯಿತು.
2025-26ನೆ ಸಾಲಿನ ವಾರ್ಷಿಕ ಬಜೆಟ್‍ನಲ್ಲಿ ಮದ್ದೂರು ನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲು ಘೋಷಿಸಲಾಗಿತ್ತು. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ವಿಸ್ತೃತ ಯೋಜನಾ ವರದಿಯನ್ನೂ ತಯಾರಿಸಲಾಗಿದೆ.
ಮದ್ದೂರು ಪಟ್ಟಣದ ಟಿ.ಬಿ.ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆಯು ಜನನಿಬಿಡ ಹಾಗೂ ವಾಣಿಜ್ಯ ಚಟುವಟಿಕೆಯುಳ್ಳ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಅಧಿಕ ವಾಹನ ಸಂಚಾರವಿದ್ದು ಪುರಸಭೆಯ ಸುಪರ್ದಿಯಲ್ಲಿದೆ. ಬಿಎಂಐಸಿಎಪಿಎ ಅವರು ತಯಾರಿಸಿರುವ ಯೋಜನಾ ನಕ್ಷೆಯಲ್ಲಿ ಇದನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿ ಯೋಜನಾ ವರದಿ ಪರಿಶೀಲಿಸಿದ ಮುಖ್ಯಮಂತ್ರಿ, ಈ ರಸ್ತೆಯನ್ನು 80 ಅಡಿ ವಿಸ್ತರಿಸಲು ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮದ್ದೂರು ಶಾಸಕ ಕೆ.ಎಂ.ಉದಯ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





