ಕೆಎಸ್ಸಾರ್ಟಿಸಿಗೆ ಜರ್ಮನಿಯ ನಿಯೋಗ ಭೇಟಿ

ಬೆಂಗಳೂರು : ಜರ್ಮನಿ ಸರಕಾರದ ಫೆಡರಲ್ ಸಚಿವಾಲಯ ಎಕಾನಾಮಿಕ್ ಕೋಆಪರೇಶನ್ ಆಂಡ್ ಡೆವಲಪ್‍ಮೆಂಟ್‍ನ ಉನ್ನತ ಮಟ್ಟದ ನಿಯೋಗವು ಭಾರತದ ಪ್ರವಾಸದ ಭಾಗವಾಗಿ ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಿಯೋಗದ ಸದಸ್ಯರು ದೃಷ್ಟಿ ದೋಷ ಹೊಂದಿದ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಸಹಾಯಕ ಧ್ವನಿ-ನೇವಿಗೇಶನ್ ಪರಿಹಾರ ‘ಧ್ವನಿ ಸ್ಪಂದನ-ಆನ್‍ಬೋರ್ಡ್’ ಬಗ್ಗೆ ಮಾಹಿತಿ ಪಡೆದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಧ್ವನಿ ಸ್ಪಂದನ ಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿ, ಈ ಯೋಜನೆಗೆ ಭಾರತ ಸರಕಾರದಿಂದ ದೊರೆತ ಪ್ರಶಸ್ತಿಗಳನ್ನು ತೋರಿಸಿದರು.
ಈ ನಿಯೋಗದಲ್ಲಿ ಬಿಎಂಝೆಡ್‍ನ ಮಹಾ ನಿರ್ದೇಶಕಿ ಕ್ರಿಸ್ಟೀನ್ ಟೋಟ್‍ಝ್ಕೆ, ಬಾರ್ಬರಾ ಶಾಫರ್, ಕ್ರಿಸ್ಟೋಫ್ ವಾನ್ ಸ್ಟೆಕೋವ್ ಹಾಜರಿದ್ದರು.
ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಮತ್ತು ಜಿಐಝೆಡ್‍ನ ಗ್ರೀನ್ ಅರ್ಬನ್ ಮೊಬಿಲಿಟಿ ಇನೋವೇಶನ್ ಮುಂದಾಳತ್ವದಲ್ಲಿ ವಿಸ್ತರಿಸಲ್ಪಟ್ಟ ಆನ್‍ಬೋರ್ಡ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ಮಾಹಿತಿಯನ್ನು ನಿಯೋಗಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಜರ್ಮನ್ ರಾಯಭಾರ ಕಚೇರಿ ನವದಿಲ್ಲಿಯ ಗೊಟ್‍ಫ್ರೈಡ್ ವಾನ್ ಗೆಮಿಂಗನ್, ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಶೀನಂ ಪುರಿ, ಜಾಸ್ಮಿನ್ ಕೌರ್, ಜಿಐಝಡ್ ದೇಶ ನಿರ್ದೇಶಕಿ ಜುಲಿ ರೆವಿಯರ್ ಮತ್ತಿತರರು ಉಪಸ್ಥಿತರಿದ್ದರು.







