ಪೊಲೀಸ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿ ಸಾವು ಪ್ರಕರಣ; ನ್ಯಾಯಾಂಗ ತನಿಖೆಗೆ ಪಿಯುಸಿಎಲ್ ಆಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು : ಪರಿಶಿಷ್ಟ ಜಾತಿಗೆ ಸೇರಿದ ದಿನಗೂಲಿ ನೌಕರ ದರ್ಶನ್ ಎಂಬಾತನನ್ನು ವಿವೇಕನಗರ ಪೊಲೀಸ್ ಠಾಣಾಧಿಕಾರಿಗಳು ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡಿದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ಸತ್ಯಶೋಧನಾ ವರದಿಯಲ್ಲಿ ತಿಳಿದುಬಂದಿದ್ದು, ಸರಕಾರ ಪ್ರಕರಣವನ್ನು ಈ ಕೂಡಲೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಸಂಘಟನೆ ಆಗ್ರಹಿಸಿದೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್ನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ ಇತ್ತೀಚೆಗೆ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪುನರ್ವಸತಿ ಕೇಂದ್ರದಲ್ಲಿ ಸಾವಿಗೀಡಾಗಿದ್ದ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಸತ್ಯಶೋಧನಾ ತಂಡದ ಮಧ್ಯಂತರ ವರದಿ ಬಿಡುಗಡೆ ಮಾಡಿ ಮಾತನಾಡಿದರು.
ಮೃತ ದರ್ಶನ್ ತಾಯಿ ಆದಿಲಕ್ಷ್ಮೀ ಹೇಳಿಕೆಯಂತೆ, ವಿವೇಕನಗರ ಪೊಲೀಸ್ ಠಾಣೆಯವರು ದರ್ಶನ್ಗೆ ಪೊಲೀಸ್ ವಶದಲ್ಲಿದ್ದ ವೇಳೆ ನೀಡಿದ ಚಿತ್ರಹಿಂಸೆಯನ್ನು ಮುಚ್ಚಿಹಾಕಲು, ಪೊಲೀಸರು ಯೂನಿಟಿ ಫೌಂಡೇಶನ್ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಸಿಬ್ಬಂದಿ ಪವನ್ ಇನ್ನಿತರರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಅಕ್ರಮವಾಗಿ ಬಂಧಿಸಿ ಲಾಠಿ ಮತ್ತು ಪೈಪ್ಗಳಿಂದ ಕ್ರೂರವಾಗಿ ಹಲ್ಲೆ ನಡೆಸಿ ಸಾವಿಗೆ ಕಾರಣರಾದ ವಿವೇಕನಗರ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಮತ್ತು ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಪೊಲೀಸರು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ದರ್ಶನ್ ಕುಟುಂಬಸ್ಥರಿಗೆ ಬೆದರಿಕೆ ಹಾಕಿರುವುದರಿಂದ ಸಂತ್ರಸ್ತ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ರಾಜೇಂದ್ರ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶುಜಾಯತ್ ಉಲ್ಲಾ, ಸಂಚಾಲಕಿ ವಿ.ಚಂದ್ರಶ್ರೀ, ವಕೀಲ ನರಸಿಂಹಮೂರ್ತಿ, ದರ್ಶನ್ ಕುಟುಂಬಸ್ಥರು ಉಪಸ್ಥಿತರಿದ್ದರು.







