ಬಿಜೆಪಿಯಲ್ಲಿ ನಿಲ್ಲದ ಗುಂಪುಗಾರಿಕೆ; ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ ರಮೇಶ್ ಜಾರಕಿಹೊಳಿ ನೇತೃತ್ವದ ಬಣ

ರಮೇಶ್ ಜಾರಕಿಹೊಳಿ
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಗೊಂಡ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು, ಗುಂಪುಗಾರಿಕೆ ಆರಂಭವಾಗಿದೆ. ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿತ ಬಣ ವರಿಷ್ಠರ ಭೇಟಿಗೆ ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶ್ರೀಮಂತ್ ಪಾಟೀಲ್, ಬಿ.ವಿ.ನಾಯಕ್ ಸೇರಿದಂತೆ ಕೆಲವು ಮುಖಂಡರು ಪಕ್ಷದ ವರಿಷ್ಠರ ಭೇಟಿಗೆ ಸಮಯಾವಕಾಶ ಕೇಳಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ದಿಲ್ಲಿ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ‘ಪಕ್ಷದ ಹೈಕಮಾಂಡ್ ಜತೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾಲಾವಕಾಶ ಸಿಕ್ಕಿದೆ. ಸದ್ಯಕ್ಕೆ ಅಗತ್ಯ ಇರುವ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಈ ಭೇಟಿಯು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಪಕ್ಷದ ಸಂಘಟನಾತ್ಮಕ ವಿಷಯ, ವಿಶೇಷವಾಗಿ 2028ರ ಚುನಾವಣೆಗೆ ಸಂಬಂಧಿಸಿದ ವಿಚಾರಗಳು ಚರ್ಚೆಯಾಗಲಿವೆ’ ಎಂದು ಹೇಳಿದ್ದಾರೆ.





