‘ಬ್ಲಾಕ್‍ಚೇನ್ ತಂತ್ರಜ್ಞಾನ ಕ್ಷೇತ್ರ ಮತ್ತು ಸೈಬರ್ ಸುರಕ್ಷತಾ ಕೇಂದ್ರವಾಗಿ ಕರ್ನಾಟಕ’; ಕಾಯಿನ್‍ಬೇಸ್ ಇಂಡಿಯಾ ಜೊತೆ ರಾಜ್ಯ ಸರಕಾರ ಒಪ್ಪಂದ

ಬೆಂಗಳೂರು : ಕರ್ನಾಟಕವನ್ನು ದೇಶದ ಪ್ರವರ್ತಕ ನಾವೀನ್ಯತಾ ಕೇಂದ್ರವಾಗಿ ಬೆಳೆಸುವ ಮತ್ತು ಡೀಪ್‍ಟೆಕ್ ಕ್ಷೇತ್ರದ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಕಾರ್ಯಗತಗೊಳ್ಳುವುದಕ್ಕೆ ವೇಗ ನೀಡಲು ನೆರವಾಗುವ ಎರಡು ಮಹತ್ವದ ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ರಾಜ್ಯ ಸರಕಾರವು ಬುಧವಾರ ಅಂಕಿತ ಹಾಕಿದೆ.
ವಿಶ್ವದ ಪ್ರಮುಖ ಡಿಜಿಟಲ್ ಹಣಕಾಸು ಸೇವೆಗಳ ಕಂಪನಿಯಾಗಿರುವ ಕಾಯಿನ್‍ಬೇಸ್ ಇಂಡಿಯಾ ಜೊತೆಗಿನ ಒಪ್ಪಂದವು ಆನ್-ಚೇನ್ ನಾವೀನ್ಯತೆ ರಾಜಧಾನಿ ಮತ್ತು ಸೈಬರ್ ಸುರಕ್ಷತೆಯ ಶ್ರೇಷ್ಠತಾ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲಿದೆ.
ರೆಫ್ರಾಯ್ಡ್ ಟೆಕ್ನಾಲಜೀಸ್ ಜೊತೆಗಿನ ಎರಡನೇ ಒಪ್ಪಂದವು, ಮುಂದಿನ ಪೀಳಿಗೆಯ ಕೃತಕ ಬುದ್ಧಿಮತ್ತೆ (ಎಐ) ಮತ್ತು ಹೈಪರ್‍ಸ್ಕೇಲ್ ಕೆಲಸದ ಹೊರೆಗಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ, ಇಂಧನ-ಸಮರ್ಥ, ಭಾರತದಲ್ಲಿಯೆ ತಯಾರಿಸಿದ ಲಿಕ್ವಿಡ್-ಕೂಲಿಂಗ್ ಫೋರ್ಟ್‍ಫೋಲಿಯೊವನ್ನು ರಾಜ್ಯದಲ್ಲಿ ಪರಿಚಯಿಸಲಿದೆ. ಜಗತ್ತಿಗೆ ನಾವೀನ್ಯತೆ ನೀಡುವ ಭಾರತದ ಮಹತ್ವಾಕಾಂಕ್ಷೆಯನ್ನು ಬಲಪಡಿಸಲು ಇದು ನೆರವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಪಾಲುದಾರಿಕೆಗಳ ಮೂಲಕ, ನಮ್ಮ ಯುವಕರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಅನಾವರಣ ಮಾಡುವುದು, ಸಮರ್ಥ ತಾಂತ್ರಿಕ ಸಾಮರ್ಥ್ಯ ನಿರ್ಮಿಸುವುದು ಮತ್ತು ಕರ್ನಾಟಕವನ್ನು ಡಿಜಿಟಲ್ ನಾವೀನ್ಯತೆಯಲ್ಲಿ ಜಾಗತಿಕ ಪ್ರವರ್ತಕವನ್ನಾಗಿ ಮಾಡುವ ನಮ್ಮ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾಯಿನ್‍ಬೇಸ್ ಇಂಡಿಯಾ ಜೊತೆಗಿನ ಒಪ್ಪಂದದ ಫಲವಾಗಿ ಆನ್-ಚೈನ್ (ಬ್ಲಾಕ್‍ಚೈನ್) ನಾವೀನ್ಯತೆ ಮತ್ತು ಸೈಬರ್ ಸುರಕ್ಷತೆಯಲ್ಲಿ ಕರ್ನಾಟಕವನ್ನು ಸನ್ನದ್ಧಗೊಳಿಸುವ ಒಪ್ಪಂದದಡಿಯಲ್ಲಿ, ರಾಜ್ಯ ಸರಕಾರ ಮತ್ತು ಕಾಯಿನ್‍ಬೇಸ್ ಎರಡು ಬಗೆಗಳಲ್ಲಿ ಪರಸ್ಪರ ಸಹಕರಿಸಲಿವೆ. ರಾಜ್ಯದಲ್ಲಿನ ಬ್ಲಾಕ್‍ಚೇನ್ ವ್ಯವಸ್ಥೆಯನ್ನು ಬಲಪಡಿಸಲು ಈ ಒಪ್ಪಂದ ನೆರವಾಗಲಿದೆ. ಕರ್ನಾಟಕದ ಸೈಬರ್ ಸುರಕ್ಷತಾ ಸಿದ್ಧತೆಯನ್ನು ಬಲಪಡಿಸುವುದರ ಭಾಗವಾಗಿ ಶಿಕ್ಷಣ ಸಂಸ್ಥೆಗಳು, ನವೋದ್ಯಮಗಳು ಮತ್ತು ಸಾರ್ವಜನಿಕರಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದ ತಿಳಿವಳಿಕೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಡೆವಲಪರ್‌ಗಳ ಕೌಶಲ ವೃದ್ಧಿ, 25ಕ್ಕೂ ಹೆಚ್ಚು ಹೊಸ ಆನ್-ಚೈನ್ ನವೋದ್ಯಮಗಳಿಗೆ ಅನುಕೂಲತೆ ಕಲ್ಪಿಸುವುದು, ರಾಜ್ಯದಾದ್ಯಂತ ಬ್ಲಾಕ್‍ಚೈನ್ ಜಾಗೃತಿ ಅಭಿಯಾನ ಪ್ರಾರಂಭಿಸುವುದು, ಸೈಬರ್ ಸುರಕ್ಷತೆ ಮೂಲಭೂತ ವಿಷಯಗಳಲ್ಲಿ 1 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳಿಗೆ ತರಬೇತಿ ನೀಡುವುದು, ಸೈಬರ್-ಸಿದ್ಧತಾ ಟೂಲ್‍ಕಿಟ್‍ಗಳೊಂದಿಗೆ 100ಕ್ಕೂ ಹೆಚ್ಚು ನವೋದ್ಯಮಗಳನ್ನು ಸಜ್ಜುಗೊಳಿಸುವುದು ಹಾಗೂ ಸುರಕ್ಷಿತ ಡಿಜಿಟಲ್ ಪ್ರವೃತ್ತಿಗಳನ್ನು ಅಳವಡಿಸಿಕೊಳ್ಳುವುದರ ಕುರಿತು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ರೆಫ್ರಾಯ್ಡ್ ಟೆಕ್ನಾಲಜೀಸ್ ಜೊತೆಗಿನ ಒಪ್ಪಂದದ ಫಲವಾಗಿ ಕರ್ನಾಟಕವು ಅತ್ಯಾಧುನಿಕ ಡಿಜಿಟಲ್ ಮೂಲಸೌಲಭ್ಯ ಅಭಿವೃದ್ಧಿಪಡಿಸಲು ನೆರವಾಗುವ ದೇಶದಲ್ಲಿಯೇ ತಯಾರಿಸಿದ ಭಾರತದ ಮೊದಲ ಸಮಗ್ರ ಲಿಕ್ವಿಡ್ ಕೂಲಿಂಗ್ ಸೊಲುಷನ್ಸ್ ಬಳಕೆಯ ತಾಣವಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಒಪ್ಪಂದಗಳಿಗೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್., ಈ ಉಪಕ್ರಮಗಳು ರಾಜ್ಯವನ್ನು ಸರಕಾರದ ಆಶಯದಂತೆ ಡೀಪ್‍ಟೆಕ್ ತಂತ್ರಜ್ಞಾನ ಆರ್ಥಿಕತೆ ಮತ್ತು ಅಭಿವೃದ್ಧಿಯ ಹೊಸ ಕ್ಷೇತ್ರಕ್ಕೆ ಕೊಂಡೊಯ್ಯಲು ಸಹಾಯ ಮಾಡಲಿವೆ. ಕರ್ನಾಟಕವನ್ನು ತಂತ್ರಜ್ಞಾನದಲ್ಲಿ ನಾವೀನ್ಯತೆಗಾಗಿ ಮಾದರಿ ರಾಜ್ಯವನ್ನಾಗಿ ಮಾಡಲು ಮಹತ್ವದ ಕೊಡುಗೆ ನೀಡಲಿವೆ ಎಂದು ಬಣ್ಣಿಸಿದರು.







