ಕನಿಷ್ಠ ಮಕ್ಕಳು ದಾಖಲಾಗದಿದ್ದಲ್ಲಿ, ಮುಂದಿನ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿ ಆರಂಭ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಈ ವರ್ಷ ಸರಕಾರಿ ಶಾಲೆಗಳಲ್ಲಿ ನಿಗದಿತ ಕನಿಷ್ಠ ಸಂಖ್ಯೆಗಿಂತ ಕಡಿಮೆ ಮಕ್ಕಳಿದ್ದರೆ, ಮುಂದಿನ ಶೈಕ್ಷಣಿಕ ವರ್ಷದಿಂದ(2026-27) ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1,105 ಶಾಲೆಗಳು, 126 ಪಿಎಂಶ್ರೀ ಶಾಲೆಗಳು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಯೋಜನೆಯಡಿ 1,105 ಶಾಲೆಗಳು ಮತ್ತು 1,699 ಮ್ಯಾಗ್ನೆಟ್ ಶಾಲೆಗಳು ಹೀಗೆ ಒಟ್ಟು 4,056 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲು ರಾಜ್ಯ ಸರಕಾರ ಅನುಮತಿ ನೀಡಿತ್ತು.
ಅದರಂತೆ ಪೂರ್ವ ಪ್ರಾಥಮಿಕ ತರಗತಿ ಆರಂಭಕ್ಕೆ ಆಯ್ಕೆಗೊಂಡ 4 ರಿಂದ 5ನೆ ವರ್ಷ ವಯಸ್ಸಿನ ಕನಿಷ್ಠ 20 ವಿದ್ಯಾರ್ಥಿಗಳು ಎಲ್ಕೆಜಿಗೆ ದಾಖಲಾದರೆ ಮಾತ್ರ, ಈ ಶೈಕ್ಷಣಿಕ ವರ್ಷದಿಂದ ಎಲ್ಕೆಜಿಯನ್ನು ಆರಂಭಿಸಬೇಕು. ಒಂದು ವೇಳೆ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗದಿದ್ದಲ್ಲಿ, ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪೂರ್ವ ಪ್ರಾಥಮಿಕ ತರಗತಿಗೆ ಕನಿಷ್ಠ 20 ಮತ್ತು ಗರಿಷ್ಠ 40 ಮಕ್ಕಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು. ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕ ಮತ್ತು ಒಬ್ಬ ಆಯಾರನ್ನು ನಿಯಮಾನುಸಾರ ತಾತ್ಕಾಲಿಕವಾಗಿ ನೇಮಕಗೊಳಿಸಬೇಕು.
ಶಿಕ್ಷಕರಿಗೆ ಮಾಸಿಕ 12 ಸಾವಿರ ರೂ. ಮತ್ತು ಓರ್ವ ಆಯಾಗೆ ಮಾಸಿಕ 6,250 ರೂ. ಸಂಭಾವನೆ ನಿಗದಿ ಮಾಡಬೇಕು. ಪೂರ್ವ ಪ್ರಾಥಮಿಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಗ್ಯ, ಪೂರಕ ಪೌಷ್ಠಿಕ ಆಹಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ.







