ಸೈಬರ್ ಅಪರಾಧಕ್ಕೆ ನಿರ್ಲಕ್ಷ್ಯವೇ ಕಾರಣ : ಎಂ.ವಿನೋದ್ ಕುಮಾರ್

ಬೆಂಗಳೂರು : ಬಹುತೇಕ ಸೈಬರ್ ಅಪರಾಧ ಪ್ರಕರಣಗಳು ನಿರ್ಲಕ್ಷ್ಯದಿಂದಲೇ ಸಂಭವಿಸುತ್ತವೆ ಎಂದು ಶಿರಾ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಂ.ವಿನೋದ್ ಕುಮಾರ್ ಅಭಿಪ್ರಾಯಪಟ್ಟರು.
ಬಿಇಎಸ್ ಕಾನೂನು ಮಹಾವಿದ್ಯಾಲಯವು ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಹಕಾರ ರತ್ನ ಬಿ.ಎಲ್.ಲಕ್ಕೇಗೌಡ ಸ್ಮರಣಾರ್ಥ ಬೆಂಗಳೂರು ವಲಯ ಮಟ್ಟದ 1ನೇ ಅಂತರ ಕಾಲೇಜು ಕನ್ನಡ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ತಂತ್ರಜ್ಞಾನದಿಂದ ಎಷ್ಟು ಅನುಕೂಲಗಳಿವೆಯೋ, ಅಷ್ಟೇ ಅನಾನುಕೂಲಗಳಿವೆ. ಸಾಮಾಜಿಕ ಮಾಧ್ಯಮವನ್ನು ಜಾಗರೂಕತೆಯಿಂದ ಬಳಸುವುದು ಅತೀ ಮುಖ್ಯ. ಒಮ್ಮೆ -ನಮ್ಮ ಮೊಬೈಲ್ ಹ್ಯಾಕ್ ಆಯಿತೆಂದರೆ, ನಮ್ಮ ಎಲ್ಲಾ ದತ್ತಾಂಶ (ಡೇಟಾ)ವೂ ಇತರರ ಕೈ ಸೇರುತ್ತದೆ. ಅನೇಕರು ಕೆಲಸ ಸಿಗುತ್ತದೆಂದು, ಆಫರ್ ದೊರಕುತ್ತದೆಂದು ಹೀಗೆ ನಾನಾ ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ'' ಎಂದರು.
''ನಾನು ಈ ಕಾಲೇಜಿಗೆ ಸೇರುವ ಸಂದರ್ಭದಲ್ಲಿ ಕಾಲೇಜಿನ ಶುಲ್ಕ ಪಾವತಿಸುವ ಸಾಮರ್ಥ್ಯವಿರಲಿಲ್ಲ. ಆ ವೇಳೆ ಲಕ್ಕೇಗೌಡರು ನನಗೆ ತಡವಾಗಿ ಶುಲ್ಕ ಪಾವತಿಸಲು ಅನುವು ಮಾಡಿಕೊಟ್ಟ ಕಾರಣದಿಂದ ಇಂದು ನಾನು ಈ ಹಂತಕ್ಕೆ ತಲುಪಿದ್ದೇನೆ. ಲಕ್ಕೇಗೌಡರ ಸಹಾಯದ ಹೊರತು ನಾನು ಕಾನೂನು ಪದವಿ ಓದಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.
ಈ ವೇಳೆ ಬಿಇಎಸ್ ಕಾನೂನು ಮಹಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಭಾರತ್ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಆರ್.ನಿರ್ಮಲ್ ಕುಮಾರ್, ಖಜಾಂಚಿ ಬಿ.ಎಲ್.ನಂದಿನಿ ಉಪಸ್ಥಿತರಿದ್ದರು.
ʼಚರ್ಚಾ ಸ್ಪರ್ಧೆʼ ಪವನ್ ಕಲ್ಯಾಣ್ ಪ್ರಥಮ, ಮಂಜುಳಾ ಮಾಸ್ತಿಕಟ್ಟೆ ದ್ವಿತೀಯ :
ಚರ್ಚಾ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಲಾ ಕಾಲೇಜು ವಿದ್ಯಾರ್ಥಿ ಪವನ್ ಕಲ್ಯಾಣ್ ಜಿ. ಪ್ರಥಮ, ಡಿಪಿಎನ್ ಕಾಲೇಜ್ ಆಫ್ ಲಾ ವಿದ್ಯಾರ್ಥಿನಿ ಮಂಜುಳಾ ಮಾಸ್ತಿಕಟ್ಟೆ ದ್ವಿತೀಯ, ಎಂಕೆಪಿಎಂ ಆರ್‌ವಿ ಇನ್ಸ್‌ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನ ವಿದ್ಯಾರ್ಥಿ ಮನೋಜ್ ಕುಮಾರ್ ಕೆ.ಪಿ. ತೃತೀಯ ಬಹುಮಾನ ಗಳಿಸಿದರು.
ಬಹುಮಾನಗಳು ಕ್ರಮವಾಗಿ 15 ಸಾವಿರ, 10 ಸಾವಿರ ಹಾಗೂ 5 ಸಾವಿರ ರೂ. ನಗದು ಸಹಿತ ಟ್ರೋಫಿ, ಪ್ರಮಾಣಪತ್ರ ಒಳಗೊಂಡಿವೆ. ಜತೆಗೆ, ಐವರು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಈ ಬಹುಮಾನವು 1 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.







