ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ : ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು : ಕಳೆದ ಒಂದು ದಶಕದಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ಇತ್ತೀಚಿಗೆ ಯುವ ಇತಿಹಾಸಕಾರರು ಬರುತ್ತಿದ್ದಾರೆ. ಅವರು ಭಾರತದ ಇತಿಹಾಸ ತಪ್ಪಾಗಿದೆ. ಅದನ್ನು ನಾವು ಬದಲಾಯಿಸುತ್ತೇವೆ ಎಂದು ಅವರದೇ ಆದ ರೀತಿಯಲ್ಲಿ ಇತಿಹಾಸ ಬರೆಯುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದ್ದಾರೆ.
ಗುರುವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಆಯೋಜಿಸಿದ್ದ ‘ಕನ್ನಡ ನುಡಿ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಒಬ್ಬರು ಅಶೋಕನ ಕುರಿತು ಬರೆದಿರುವ ಕೃತಿಯಲ್ಲಿ ಬುದ್ಧನನ್ನು ಕಡಿಮೆ ಎನ್ನುವಂತೆ ಚಿತ್ರಿಸಿದ್ದಾರೆ ಎಂದು ತಿಳಿಸಿದರು.
ಬೌದ್ಧ ಧರ್ಮ ವಿಭಿನ್ನ ಮತ್ತು ವಿಶಿಷ್ಟ ಧರ್ಮವಾಗಿ ಬೆಳೆದಿದ್ದರೂ ಕೂಡ ಉಪನಿಷತ್ತಿನಲ್ಲಿ ಹೇಳಿರುವುದನ್ನೇ ಬುದ್ಧ ಹೇಳಿರುವುದಾಗಿ ಸುಳ್ಳುಗಳನ್ನು ಭಿತ್ತಲಾಗಿದೆ. ಈ ರೀತಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಡಾ.ಸಿ.ಚಂದ್ರಪ್ಪ ಅವರಂತಹ ವಿದ್ವಾಂಸರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಗಾಂಧಿ ಅವರನ್ನು ಕೂಡ ನಗಣ್ಯವನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಮಹಾತ್ಮ ಗಾಂಧಿ ನರೇಗಾ ಎನ್ನುವ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ತೆಗೆದಿದ್ದಾರೆ. ಖಾತ್ರಿಯಾಗಿದ್ದ ಯೋಜನೆಯನ್ನು ಖಾತ್ರಿ ಅಲ್ಲವಾಗಿಸುವಂತೆ ಮಾಡಿದ್ದಾರೆ. ಅದರಲ್ಲಿ ಬೇಡಿಕೆಗೆ ತಕ್ಕ ಹಾಗೆ ಉದ್ಯೋಗವನ್ನು ಪಡೆಯಬಹುದಾಗಿತ್ತು. ಆದರೆ ಈಗ ಕೆಲಸ ಇದ್ದರೆ ಮಾತ್ರ ಕೆಲಸ ಮಾಡಬೇಕಿದೆ. ಉದ್ಯೋಗದ ಖಾತ್ರಿ ಈಗ ಹೋಗಿದೆ ಎಂದರು.
ಭಾರತದ ಅಸ್ಮಿತೆ ಗಾಂಧಿಯ ಹೆಸರನ್ನೇ ಅಳಿಸುವ ಈ ಕಾಲದಲ್ಲಿ ಇತಿಹಾಸ ತಿರುವಚುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ. ಹಿಂದೂ ಧರ್ಮವನ್ನು ನಾನು ಬಾಲ್ಯದಿಂದ ನೋಡಿಕೊಂಡು ಬಂದಿರುವ ಹಾಗೆ ಸೌಹಾರ್ದ ಮತ್ತು ಸಹಬಾಳ್ವೆಯ ಧರ್ಮ. ಯಾವುದೇ ಧರ್ಮದ ಜನರನ್ನು ಸಹಿಸಿಕೊಳ್ಳುವ ಮನೋಧರ್ಮ ಹಿಂದೂಗಳಲ್ಲಿ ಇತ್ತು. ಜಾತಿ ಪದ್ಧತಿಯ ಹೊರತಾಗಿಯೂ ಇನ್ನೊಬ್ಬರನ್ನು ಸಹಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಮುಸ್ಲಿಂ, ಕ್ರೈಸ್ತ ಧರ್ಮದ ಹಬ್ಬದ ಸಂದರ್ಭಗಳಲ್ಲಿ ಕೊಡು, ಕೊಳ್ಳುವಿಕೆ ಇರುತ್ತಿತ್ತು. ಈಗ ಕಾಲ ಎಷ್ಟು ಬದಲಾಗಿದೆ ಎಂದರೆ ಕೇರಳದಲ್ಲಿ ಕ್ರಿಸ್‍ಮಸ್ ಪ್ರಯುಕ್ತ ಮಕ್ಕಳು ಹಾಡು ಹಾಡುತ್ತಾ ಹೋಗುವಾಗ ಸಂಘಪರಿವಾರದವರು ಹೊಡೆದಿದ್ದಾರೆ. ಇಷ್ಟೊಂದು ಅಸಹನೆ ಈಗ ಬಂದಿದೆ. ಸೌಹಾರ್ದವನ್ನು ಇಲ್ಲವಾಗಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಎಲ್ಲವನ್ನೂ ಹಿಂದುತ್ವದ ಕನ್ನಡಿಯಲ್ಲಿ ನೋಡುವಂತಾಗಿದೆ. ನಮ್ಮ ನಮ್ಮಲ್ಲೇ ಬೇಧ ಭಾವ ಮಾಡುವಂತಹ ರಾಜಕೀಯ ಕ್ರೌರ್ಯವನ್ನು ನಾವು ಖಂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಲೇಖಕ ಡಾ.ಸಿ.ಚಂದ್ರಪ್ಪ, ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ, ಪ್ರೊ.ಅಂಜಿನ ರೆಡ್ಡಿ ಕೆ.ಆರ್, ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜೀವನ್ಮುಖಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಕುವೆಂಪು ಅವರು ಬಹಳ ದೊಡ್ಡ ಕನ್ನಡದ ಚೇತನ. ಅವರ ಬಗ್ಗೆ ಒಂದು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಕುವೆಂಪು ಅವರು ಭಾರತ ರತ್ನಕ್ಕೆ ಅರ್ಹರು ಅವರಿಗೆ ಆದಷ್ಟು ಬೇಗ ಭಾರತ ರತ್ನ ಸಿಗಲಿ.
- ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ







