ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸುವಂತೆ ಒತ್ತಾಯಿಸಿ ಸಿಎಂಗೆ ಹೋರಾಟಗಾರರು, ಸಾಹಿತಿಗಳಿಂದ ಪತ್ರ

ಬೆಂಗಳೂರು : ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ‘ಘೋರ ಅಪರಾಧ’ ಎಂದು ಪರಿಗಣಿಸಬೇಕು ಮತ್ತು ಇಂತಹ ಅಪರಾಧಗಳನ್ನು ನಿಗ್ರಹಿಸಲು ಸರಕಾರ ಕಠಿಣ ಕಾನೂನ್ನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮ್ಯಯಗೆ ಪತ್ರ ಬರೆದಿದ್ದಾರೆ.
ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ, ಸನತ್ ಕುಮಾರ್ ಬೆಳಗಲಿ, ಎಂ.ಎನ್.ಅಹೋಬಳಪತಿ, ರಘೋತ್ತಮ ಹೊ.ಬ, ಸುಭಾಸ್ ಹೂಗಾರ್, ಎನ್.ರವಿಕುಮಾರ್, ಸಾಹಿತಿಗಳಾದ ಬಸವರಾಜ ಸೂಳಿಬಾವಿ, ವಿಕಾಸ್ ಮೌರ್ಯ, ನಳಿನ ಚಿಕ್ಕಮಗಳೂರು, ಹೋರಾಟಗಾರರಾದ ಮಹಾಂತೇಶ್ ಕೆ., ಜ್ಯೋತಿ ಅನಂತಸುಬ್ಬರಾವ್, ಅನಂತನಾಯಕ್, ವಿ.ಎಲ್.ನರಸಿಂಹ ಮೂರ್ತಿ, ಕಲಾವಿದರಾದ ಡಾ.ಎಂ.ಗಣೇಶ್, ಹಾದಿಮನಿ, ವಕೀಲ ಕೆ.ಪಿ.ಶ್ರೀಪಾಲ್ ಸೇರಿದಂತೆ ನೂರಾರು ಸಾಮಾಜಿಕ ಕಾರ್ಯಕರ್ತರು ಪತ್ರದಲ್ಲಿ ಸಹಿ ಹಾಕಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ. ಇದೊಂದು ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾನ್ ಮಾನವತಾವಾದಿಗಳಾದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು ಎಂದು ಹೇಳಿದ್ದಾರೆ.
ವಿಪರ್ಯಾಸವೆಂದರೆ ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ. ಇದು ಸಮಸಮಾಜ ನಿರ್ಮಾಣದ ಎಲ್ಲ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ. ಇಂತಹ ಮನೋಸ್ಥಿತಿ ಎಷ್ಟೊಂ ದು ಕ್ರೌರ್ಯವನ್ನು ಮೆರೆಯುತ್ತಿದೆ ಎಂದರೆ, ಅಂತರ್ ಜಾತಿ ವಿವಾಹಗಳಾದ ಮಕ್ಕಳನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿದ್ದಾರೆ.
ಇದಕ್ಕೆ ‘ಮರ್ಯಾದ ಹತ್ಯೆ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ, ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ. ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ‘ಘೋರ ಅಪರಾಧ’ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸರಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ ಜಾರಿಗೆ ತರಬೇಕು. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ಬಲಿಯಾದ ‘ಮಾನ್ಯ’ಳ ಹೆಸರಲ್ಲಿ ಉಗ್ರ ಶಿಕ್ಷೆಯ ಕಾನೂನು ರೂಪಿಸಬೇಕಾಗಿದೆ. ಈ ಉಗ್ರ ಶಿಕ್ಷೆಯ ಕಾಯ್ದೆಗೆ ‘ಮಾನ್ಯ’ ಹೆಸರಿಡುವುದು ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದ ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ ಎಂದು ಸಾಹಿತಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.







