ಪರಿಷತ್‍ನಲ್ಲಿ ಕೈಗೊಂಡ ನೇರ ನೇಮಕಾತಿ ಪ್ರಕ್ರಿಯೆ ಮಾದರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ಸಿಬ್ಬಂದಿ ನೇಮಕಕ್ಕೆ ನೇರ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಆದೇಶ ಪತ್ರಗಳನ್ನು ನೀಡಿರುವುದು ಅತ್ಯಂತ ಪ್ರಶಂಸನೀಯ ಮತ್ತು ಇತರೆ ಸರಕಾರಿ ಇಲಾಖೆಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರ ನಡೆ ನಿಜಕ್ಕೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ನೇರ ನೇಮಕವಾದ ಸಿಬ್ಬಂದಿಗೆ ಆದೇಶ ಪತ್ರವನ್ನು ನೀಡಿದ ಅವರು, ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೆಇಎ ಮೂಲಕ ಆಯ್ಕೆ ಮಾಡಲು ನಿರ್ಧರಿಸಿ, ಪಾರದರ್ಶಕವಾಗಿ ಲಿಖಿತ ಪರೀಕ್ಷೆ ನಡೆಸಿ ಶೇ.1:5 ಅನುಪಾತದಲ್ಲಿ ಮೆರಿಟ್ ಪಟ್ಟಿ ಪಡೆದು ಶೇ.1:1 ಅನುಪಾತ ಆಯ್ಕೆ ಪಟ್ಟಿ ತಯಾರಿಸಿ, ಗೊಂದಲಗಳಿಗೆ ಆಸ್ಪದ ನೀಡದಂತೆ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ ಎಂದರು.
ನೇಮಕಾತಿಯ ಎಲ್ಲ ಪ್ರಕ್ರಿಯೆಗಳನ್ನು ಸಿ.ಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಸಿರುವುದು ಪಾರದರ್ಶಕ ಮತ್ತು ವೃತ್ತಿಪರತೆಯಿಂದ ಅಂತಿಮ ಅಂಕಪಟ್ಟಿ ಸಿದ್ಧಪಡಿಸಿದ್ದು, ಅದಕ್ಕೆ ಸಿಎಂ ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡಿದ್ದಾರೆ. ಸದರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಹೆಚ್ಚಿನವರು ಗ್ರಾಮೀಣ ಪ್ರತಿಭೆಗಳು ಮತ್ತು ಪದವಿಗಳ, ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ವಿಜೇತರು ಸೇರಿರುವುದು ಅಭಿನಂದನೀಯ ಎಂದು ತಿಳಿಸಲಾಗಿದೆ.





