ತಂತ್ರಾಂಶದಲ್ಲಿ ವಿನಾಯಿತಿ ದುರುಪಯೋಗ ಮಾಡಿಕೊಂಡು ಕ್ರಯಪತ್ರಗಳ ನೋಂದಣಿ ಮಾಡಿದ ಐವರು ಅಧಿಕಾರಿಗಳು ಅಮಾನತು

ಬೆಂಗಳೂರು : ಕಾವೇರಿ 2.0 ತಂತ್ರಾಂಶದ ಕಾರ್ಯ ವಿಧಾನದಲ್ಲಿ ವಿನಾಯಿತಿ ಆಯ್ಕೆಯನ್ನು ದುರುಪಯೋಗ ಮಾಡಿಕೊಂಡು, ಕ್ರಯಪತ್ರಗಳನ್ನು ನೋಂದಣಿ ಮಾಡಿದ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ರವಿವಾರದಂದು ನೋಂದಣಿ ಮತ್ತುಯ ಮುದ್ರಾಂಕ ಇಲಾಖೆಯ ಐಜಿಆರ್ ಪ್ರಕಟನೆ ಹೊರಡಿಸಿದ್ದು, ಕಾವೇರಿ 2.0 ತಂತ್ರಾಂಶದಲ್ಲಿ ವಿನಾಯಿತಿ ಆಯ್ಕೆಯನ್ನು ದುರುಪಯೋಗಪಡಿಸಿಕೊಂಡು ಹಲವಾರು ಕ್ರಯಪತ್ರಗಳನ್ನು ಸರ್ಜಾಪುರ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಈ ಎಲ್ಲ ಪ್ರಕರಣಗಳ ಕುರಿತು ಸಮಗ್ರ ತನಿಖೆಯನ್ನು ಆರಂಭಿಸಲಾಗಿದೆ. ಹಾಗೆಯೇ ಕಚೇರಿಯ ಉಪನೋಂದಣಾಧಿಕಾರಿ ರವಿಸಂಕನಗೌಡ ಅವರನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.
ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪನೋಂದಣಿ ಕಚೇರಿಗಳಲ್ಲಿ ಹಲವಾರು ಕ್ರಯಪತ್ರಗಳನ್ನು ಇ-ಸ್ವತ್ತು ತಂತ್ರಾಂಶದಿಂದ ಇ-ಖಾತಾ ಮಾಹಿತಿಯನ್ನು ಕಡ್ಡಾಯವಾಗಿ ಇಂಪೋರ್ಟ್ ಮಾಡ ಬೇಕಾಗಿದ್ದರೂ, ಇದನ್ನು ಉಲ್ಲಂಘನೆ ಮಾಡಿ, ಇ-ಸ್ವತ್ತು ತಂತ್ರಾಂಶದಲ್ಲಿ ಮಾಹಿತಿ ಲಭ್ಯವಿಲ್ಲದಿದ್ದರೂ, ಕಾನೂನು ಬಾಹಿರವಾಗಿ ನೋಂದಾಯಿಸಲಾಗಿದೆ.
ಈ ಕ್ರಯಪತ್ರಗಳನ್ನು ನೋಂದಣಿ ಮಾಡಿರುವ ಒಟ್ಟು ಐದು ಉಪನೋಂದಣಾಧಿಕಾರಿಗಳ ಪೈಕಿ ಒಬ್ಬರು ನಿವೃತ್ತರಾಗಿದ್ದು, ಉಳಿದ ನಾಲ್ಕು ಉಪನೋಂದಣಾಧಿಕಾರಿಗಳಾದ ಎನ್. ಸತೀಶ್ ಕುಮಾರ್, ಶ್ರೀಧರ್, ಗಿರೀಶ್ ಚಂದ್ರ ಮತ್ತು ಆರ್.ಪ್ರಭಾವತಿ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.







