ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಪೆನಾಂಗ್ ನಿಯೋಗದ ಭೇಟಿ

ಬೆಂಗಳೂರು : ಮಲೇಷಿಯಾದ ದ್ವೀಪ ರಾಜ್ಯ ಪೆನಾಂಗ್‍ನ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ಡಿಯೋ ನೇತೃತ್ವದ ಉನ್ನತ ಮಟ್ಟದ ನಿಯೋಗ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಮಹತ್ವದ ಸಮಾಲೋಚನೆ ನಡೆಸಿತು.
ಈ ವೇಳೆ ಬೆಂಗಳೂರು ನಗರ ವಿವಿ ಹಾಗೂ ಪೆನಾಂಗ್ ನಿಯೋಗ ಉನ್ನತ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ವಿಚಾರದಲ್ಲಿ ಪರಸ್ಪರ ಸಹಕಾರದ ಸಾಧ್ಯತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದವು.
ವಿಶ್ವವಿದ್ಯಾನಿಲಯದ ಜಾಗತಿಕ ಭಾಷಾ ಕೇಂದ್ರ, ವಿಜ್ಞಾನ, ವಾಣಿಜ್ಯ, ಆಡಳಿತ ಮತ್ತು ಕಂಪ್ಯೂಟರ್ ಶಿಕ್ಷಣ ವಿಭಾಗಗಳ ಜೊತೆ ವಿದ್ಯಾರ್ಥಿ ಮತ್ತು ಬೋಧಕ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಪೆನಾಂಗ್ ನಿಯೋಗ ಅಪಾರ ಆಸಕ್ತಿ ವ್ಯಕ್ತಪಡಿಸಿತು.
ಈ ನಿಟ್ಟಿನಲ್ಲಿ ಆದಷ್ಟು ಬೇಗ ಅಧಿಕೃತ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಪೆನಾಂಗ್ ಉಪಮುಖ್ಯಮಂತ್ರಿ ಖಚಿತಪಡಿಸಿದರು. ವಿಶ್ವವಿದ್ಯಾನಿಲಯದ ನಿಯೋಗವನ್ನು ಪೆನಾಂಗ್ ಕೈಗಾರಿಕೆ ಮತ್ತು ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವರು ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ವಿವಿಯ ಕುಲಪತಿ ಪ್ರೊ.ರಮೇಶ್.ಬಿ, ಕುಲಸಚಿವ ಎ.ನವೀನ್ ಜೋಸೆಫ್, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್.ಬಿ.ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.







