‘ಕೆಪೆಕ್’ ಫಲಾನುಭವಿಗಳಿಗೆ ಹೆಚ್ಚುವರಿ ಸಹಾಯಧನ ಬಿಡುಗಡೆ

ಬೆಂಗಳೂರು : ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್)ದ ಯೋಜನೆಯಡಿಯಲ್ಲಿ ರಾಜ್ಯದ 1 ಸಾವಿರ ಮಂದಿ ಫಲಾನುಭವಿಗಳಿಗೆ 79 ಕೋಟಿ ರೂ. ಹೆಚ್ಚುವರಿ ಸಹಾಯಧನವನ್ನು ಬಿಡುಗಡೆ ಮಾಡಲು ಕೇಂದ್ರ ಸರಕಾರವು ಸ್ಪಂದಿಸಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಜ.5ರಂದು ನಡೆದ ಕೇಂದ್ರ ಆಹಾರ ಸಂಸ್ಕರಣಾ ಮಂತ್ರಾಲಯದ ಉನ್ನತ ಮಟ್ಟದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಅನುಷ್ಠಾನಕ್ಕೆ ಪ್ರಸ್ತುತ ಸಾಲಿನಲ್ಲಿ ಸರಕಾರ ಗರಿಷ್ಠ ಒತ್ತು ನೀಡುತ್ತಿದೆ.
2025-26ನೆ ಸಾಲಿನ ಬಜೆಟ್‍ನಲ್ಲಿ 5ಸಾವಿರ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಘೋಷಿಸಿದ್ದು, 206 ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಯೋಜನೆಯ ನೋಡಲ್ ಏಜೆನ್ಸಿಯಾದ ಕೆಪೆಕ್ ಈ ದಿಕ್ಕಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೇಂದ್ರ ಸರಕಾರವು ಕರ್ನಾಟಕದ 414 ಫಲಾನುಭವಿಗಳಿಗೆ ಸಹಾಯಧನ (ಸಬ್ಸಿಡಿ) ನೀಡಲು ತನ್ನ ಅನುಮೋದನೆಯನ್ನು ನೀಡಿದ್ದು, ಈ ದಿಸೆಯಲ್ಲಿ ಕೆಪೆಕ್ ಸಂಸ್ಥೆಯು ಕೂಡಲೇ ಕಾರ್ಯೋನ್ಮುಖವಾಗಿ ಈ ಫಲಾನುಭವಿಗಳಿಗೆ 16.28 ಕೋಟಿ ರೂ. ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ.
ರಾಜ್ಯದ 414 ಫಲಾನುಭವಿಗಳ ಪೈಕಿ ಸಿರಿಧಾನ್ಯ ಘಟಕಗಳು-101, ಧಾನ್ಯಗಳ(ಅಕ್ಕಿ, ಗೋದಿ, ಮೆಕ್ಕೆಜೋಳ ಇತ್ಯಾದಿ) ಘಟಕಗಳು-92, ಬೇಕರಿ ಉತ್ಪನ್ನಗಳು-45, ಎಣ್ಣೆಕಾಳುಗಳ ಘಟಕಗಳು-42, ಮಸಾಲೆ ಉತ್ಪನ್ನಗಳು-36, ಬೆಲ್ಲ ಆಧಾರಿತ ಘಟಕಗಳು-22, ಕಾಫಿ ಇತ್ಯಾದಿ ಪ್ಲಾಂಟೇಷನ್ ಬೆಳೆಗಳ ಉತ್ಪನ್ನಗಳು-18, ಹಣ್ಣಿನ ಉತ್ಪನ್ನಗಳು-12 ಪ್ರಮುಖವಾಗಿದ್ದು ಈ ಘಟಕಗಳ ಸ್ಥಾಪನೆಯ ಸಂಬಂಧ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







