ಅಪರಾಧಿಗಳಿಗೆ ಮಾಲೆ ಹಾಕಿ ಸಂಭ್ರಮಿಸಿರುವುದು ಮಾನವೀಯ ಮೌಲ್ಯಗಳ ಸಾವಿನ ಪ್ರತೀಕ : ಪ್ರೊ.ರಾಮೇಶ್ವರಿ ವರ್ಮಾ

ಬೆಂಗಳೂರು : ದೇಶದಲ್ಲಿ ಉನ್ನವೋ ಮತ್ತು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಮಾಲೆ ಹಾಕಿ, ಲಡ್ಡು ಹಂಚಿ ಸಂಭ್ರಮಿಸಿದ ಘಟನೆಗಳು ನಡೆದಿದ್ದು, ಇದು ಮಾನವೀಯ ಮೌಲ್ಯಗಳ ಸಾವಿನ ಪ್ರತೀಕವಾಗಿವೆ ಎಂದು ರಂಗಕರ್ಮಿ ಪ್ರೊ.ರಾಮೇಶ್ವರಿ ವರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಗಾಂಧಿ ಭವನದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯು ಆಯೋಜಿಸಿದ್ದ ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು-ಮಹಿಳೆಯರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದರೂ, ಮಹಿಳೆಯರ ಮೇಲೆ ಹಿಂಸೆ, ಅಗೌರವಗಳು ಹೆಚ್ಚುತ್ತಲೇ ಇವೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾಗೇಡು ಹತ್ಯೆ, ಹಾಸನದ ಪೆನ್‍ಡ್ರೈವ್ ಪ್ರಕರಣ, ಉನ್ನವೋ ಮತ್ತು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಂಡವಾಳಶಾಹಿಗಳ ಲಾಭದಾಹ, ಯುದ್ಧೊಪಕರಣಗಳ ಮಾರಾಟದ ಹುನ್ನಾರ ಯುದ್ಧಗಳನ್ನು ಹುಟ್ಟುಹಾಕುತ್ತಿವೆ. ಯುದ್ಧಗಳಲ್ಲೂ ಮಹಿಳೆಯರು ಮತ್ತು ಮಕ್ಕಳು ಮೊದಲ ಬಲಿಪಶುಗಳಾಗುತ್ತಿದ್ದಾರೆ. ಇನ್ನೊಂದೆಡೆ ಮಾಧ್ಯಮಗಳು ಕ್ರೌರ್ಯ-ಹಿಂಸೆ ಅನಾಚಾರಗಳನ್ನು ವೈಭವಿಕರಿಸುತ್ತಿವೆ. ಅದರ ಪರಿಣಾಮ ಹಾಡಹಗಲೇ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಇವೆಲ್ಲವನ್ನು ತಡೆಗಟ್ಟಲು ಪ್ರಜ್ಞಾವಂತ ಜನಗಳು ಪ್ರತಿಭಟಿಸಬೇಕಿದೆ ಎಂದು ಅವರು ಕರೆ ನೀಡಿದರು.
ಎಸ್‍ಯುಸಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ನವೋದಯ ಚಳುವಳಿಯಲ್ಲಿ ಮಹಿಳಾ ವಿಮೋಚನೆಯ ಘೋಷಣೆ ಕೇಳಿಬಂದವು. ವಿದ್ಯಾಸಾಗರ, ಸಾವಿತ್ರಿ ಬಾಯಿ ಫುಲೆ, ನೇತಾಜಿ, ಶರತ್‍ಚಂದ್ರ, ಕುದ್ಮಲ್ ರಂಗರಾವ್ ಮೊದಲಾದವರು ಮಹಿಳೆಯರ ಪರವಾಗಿ, ತುಳಿತಕ್ಕೊಳಗಾದವರಪರ ಧ್ವನಿಯೆತ್ತಿದರು. ಆದರೆ ಆ ಘೋಷಣೆಗಳು ಇಂದು ಸಂಪೂರ್ಣ ಕಣ್ಮರೆಯಾಗಿವೆ ಎಂದರು.
ಬಂಡವಾಳಶಾಹಿಗಳ ಆರ್ಥಿಕ ಲಾಭದ ಮನಸ್ಥಿತಿ ಹೆಣ್ಣುಮಕ್ಕಳನ್ನು ಒಂದು ಸರಕನ್ನಾಗಿ ಮಾಡಿದೆ. ಉನ್ನತ ನೀತಿ-ಸಂಸ್ಕೃತಿ, ಮೌಲ್ಯಗಳು ನಾಶವಾಗುತ್ತಿವೆ. ಮೂಲತಃ ನಮ್ಮದು ಮಾತೃಪ್ರಧಾನ ಸಮಾಜವಾಗಿತ್ತು, ಖಾಸಗಿ ಆಸ್ತಿಯ ಉಗಮ ಅವಳ ಶೋಷಣೆಗೆ ಅಡಿಪಾಯ ಹಾಕಿತು. ಸಮ ಸಮಾಜವನ್ನು ಕಟ್ಟಲು ಮಹಿಳೆಯರು ಸೈದ್ಧಾಂತಿಕವಾಗಿ, ಸಂಘಟನಾತ್ಮಕವಾಗಿ ಗಟ್ಟಿಯಾಗಬೇಕು, ಬಲಿಷ್ಠ ಮಹಿಳಾ ಚಳುವಳಿಗಳನ್ನು ಕಟ್ಟಬೇಕು. ಶೋಷಿತ ದುಡಿಯುವ ವರ್ಗದ ಜೊತೆಗೆ ಕೈಜೋಡಿಸಿ ಮಹಿಳೆಯರು ತಮ್ಮ ನೈಜ ವಿಮುಕ್ತಿಯನ್ನು ಸಾಧಿಸಬೇಕು ಎಂದು ಅವರು ಕರೆ ನೀಡಿದರು.
ಸಮಾವೇಶದಲ್ಲಿ ವೈದ್ಯೆ ಡಾ. ಶ್ರೀದೇವಿ ಕುಮಾರ್, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರ ಉಪಾಧ್ಯಕ್ಷೆ ಡಾ. ಸುಧಾಕಾಮತ್, ಅಕ್ಕ ಮಹಾದೇವಿ ವಿವಿ ಮಾಜಿ ಉಪಕುಲಪತಿಪ್ರೊ.ಸಬಿಹಾ ಭೂಮಿಗೌಡ, ಚಲನಚಿತ್ರಗೀತಕಾರ ಕವಿರಾಜ್, ಸಂಘಟನೆಯ ರಾಜ್ಯಾಧ್ಯಕ್ಷೆ ಎಂ.ಎನ್. ಮಂಜುಳಾ ಸೇರಿದಂತೆ ಮತ್ತಿತರರು ಇದ್ದರು.







