ಪ್ರತಿಭಾ ನಂದಕುಮಾರ್ ಬರಹಗಳಲ್ಲಿ ಮನುಷ್ಯ ಪರ ವಿಚಾರವಿದೆ : ಡಾ.ಆಶಾದೇವಿ

ಬೆಂಗಳೂರು : ಲೇಖಕಿ ಪ್ರತಿಭಾ ನಂದಕುಮಾರ್ ಅವರ ಬರಹಗಳಲ್ಲಿ ಮಹಿಳೆ-ಪುರುಷ ಪರ ಸಾಹಿತ್ಯದ ಬದಲು, ಮನುಷ್ಯ ಪರ ಸಾಹಿತ್ಯವನ್ನು ಕಾಣಬಹುದಾಗಿದ್ದು, ಇದು ಅವರ ಬರಹಗಳ ವೈಶಿಷ್ಟ್ಯವೂ ಆಗಿದೆ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರತಿಭಾ ನಂದಕುಮಾರ್ ಕಾವ್ಯ ಕುರಿತ ಉಪನ್ಯಾಸ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಅವರ ಬರಹಗಳಲ್ಲಿ ಬಂಧನಗಳನ್ನು ಕಳಚಿಕೊಳ್ಳುತ್ತಾ, ಹೊಸತನವನ್ನು ಸ್ವೀಕರಿಸವ ಅಂಶಗಳಿದ್ದು, ಅವರ ಬರಹ ಶೈಲಿಯು ಎಂತಹವರಿಗೂ ಅಚ್ಚರಿ ಮೂಡಿಸುತ್ತದೆ. ಜೀವನದ ಹಲವು ತಲ್ಲಣಗಳನ್ನು ಪ್ರತಿಭಾ ತಮ್ಮ ಬರಹದಲ್ಲಿ ವಿವರಿಸುತ್ತಾ ಸಾಗುವ ವೈಖರಿ ಮಾದರಿಯಾಗಿದೆ. ಅವರ ಬರಹಗಳು ಹೆಣ್ಣಿನ ಬದುಕು ಹಸನಾಗಬೇಕು ಎಂಬುದಿಲ್ಲ ಬದಲಾಗಿ ಮನುಷ್ಯನ ಬದುಕು ಹಸನಾಗಬೇಕು ಎಂಬುದನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಪ್ರಾಧ್ಯಾಪಕ ಸುಂದರ್ ಸಾರುಕೈ ಮಾತನಾಡಿ, ಯಾವುದೇ ಕಾವ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಬರಹಗಾರರ ತಾತ್ವಿಕ ಚಿಂತನೆಗಳನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ನಂತರ ಅವರ ಬರಹವನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ಅವರ ಕಾವ್ಯದ ರೂಪ ಹೇಗಿದೆ ಎಂಬುದನ್ನೂ ಅರ್ಥ ಮಾಡಿಕೊಂಡರೆ ಅವರ ವಿವರಣಾ ಶೈಲಿಯೂ ನಮ್ಮ ಗಮನ ಸೆಳೆಯುತ್ತದೆ ಎಂದು ತಿಳಿಸಿದರು.
ಪತ್ರಕರ್ತ ಜೋಗಿ ಮಾತನಾಡಿ, ‘ಪ್ರತಿಭಾ ನಂದಕುಮಾರ್ ಅವರು ಹತ್ತು-ಹಲವು ಆಯಾಮಗಳಲ್ಲಿ ಗುರುತಿಸಿಕೊಂಡು ಬರುತ್ತಿದ್ದಾರೆ. ಆಶ್ಚರ್ಯ ಪಡುವುದೇನೆಂದರೆ ಯಾರೇ ಹೊಗಳಲಿ-ತೆಗಳಲಿ ಎಲ್ಲವನ್ನು ಸಹಿಸಿಕೊಂಡು ತಮ್ಮದೇ ಆದ ವಿಭಿನ್ನ ಬರಹಗಳನ್ನು ನೀಡುತ್ತಿರುವ ದಿಟ್ಟ ಲೇಖಕಿ’ ಎಂದರು.
ಇದೇ ವೇಳೆ ಪ್ರತಿಭಾ ನಂದಕುಮಾರ್ ಅವರ ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ, ಶಾಪಗ್ರಸ್ತ ಕವಿ ಬೋದಿಲೇರ್, ಪ್ರತಿಭಾ ಉವಾಚ, ಕಾವ್ಯ ದಾಹ, ಇಳಿದು ಬರುವುದಿಲ್ಲ ತಾಯಿ ಹಾಗೂ ಒಂದು ಹೆಣ್ಣು ಒಂಟೆಯ ಹತ್ಯೆ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪ್ರಕಾಶಕರಾದ ಜಿ.ಎನ್.ಮೋಹನ್, ಪ್ರಕಾಶ್ ಕಂಬತ್ತಳ್ಳಿ, ಮುರಳಿ ಶ್ರೀನಿವಾಸನ್, ಬಿ.ಎಸ್.ವಿದ್ಯಾರಣ್ಯ, ಎಂ.ಸಿ.ನರೇಂದ್ರ ಹಾಗೂ ಸೂರ್ಯಕೀರ್ತಿ ಇದ್ದರು.
"ಬರಹಗಳನ್ನು ರಚಿಸುತ್ತಾ ಸಾಗಿದಾಗ ಸಾಕಷ್ಟು ಮಂದಿ ನನಗೆ ಸಹಕರಿಸಿದ ಬಗೆಯನ್ನು ಮರೆಯಲಾರೆ. ಹಲವರು ನಿರಂತರವಾಗಿ ಸಹಕರಿಸಿದ್ದಕ್ಕಾಗಿ ಆರು ಕೃತಿಗಳನ್ನು ಒಂದೇ ಬಾರಿ ಪ್ರಕಟಿಸಲು ಸಾಧ್ಯವಾಯಿತು"
-ಪ್ರತಿಭಾ ನಂದಕುಮಾರ್, ಲೇಖಕಿ







