ರಾಜ್ಯಾದ್ಯಂತ ಸಂಕ್ರಾಂತಿ ಸಂಭ್ರಮ

ಬೆಂಗಳೂರು : ವರ್ಷದ ಮೊದಲನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ರಾಜ್ಯಾದ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸಹಿತ ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಸಂಕ್ರಾಂತಿ ಸಂದರ್ಭದಲ್ಲೇ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿ ಪ್ರವೇಶ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಂಕ್ರಾಂತಿ ಹಬ್ಬದಲ್ಲಿ ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ’ ಎಂದು ಜನರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲೂ ಗುರುವಾರ ಸಂಜೆ 5.02ರ ಸುಮಾರಿಗೆ ಸೂರ್ಯ ಕಿರಣಗಳು ಗಂಗಾಧರೇಶ್ವರ ಸ್ವಾಮಿ ಶಿವಲಿಂಗದ ಮೇಲೆ ಬಿದ್ದದ್ದನ್ನು ಕಣ್ತುಂಬಿಕೊಳ್ಳಲು ದೇವಾಲಯದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಎರಡು ನಿಮಿಷಗಳ ಕಾಲ ಸೂರ್ಯ ರಶ್ಮಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ.
ಗ್ರಾಮೀಣ ಭಾಗದಲ್ಲಿ ರೈತರ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದರು. ವರ್ಷವಿಡೀ ದುಡಿದ ಜಾನುವಾರುಗಳನ್ನು ಶೃಂಗರಿಸಿ ಯಾವುದೇ ರೋಗ-ರುಜಿನಗಳು ಬಾರದಿರಲಿ ಎಂದು ಕಿಚ್ಚು ಹಾಯಿಸಿದರು. ಕಷ್ಟಪಟ್ಟು ಬೆಳೆದ ದವಸ-ಧಾನ್ಯ ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಸಿಲಿಕಾನ್ ಸಿಟಿಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಪೊಂಗಲ್ ತಯಾರಿಸಿ ಸಂಕ್ರಾಂತಿ ಸಂಭ್ರಮ: ಜಯನಗರ ಕ್ಷೇತ್ರದ ರಾಗಿಗುಡ್ಡ ಪ್ರದೇಶದಲ್ಲಿ ಬಿಜೆಪಿ ನಾಯಕರು ಪೊಂಗಲ್ ತಯಾರಿಸುವ ಮೂಲಕ ಸಂಕ್ರಾಂತಿ ಆಚರಿಸಿದರು. ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿಸೂರ್ಯ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಪೊಂಗಲ್ ತಯಾರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.







