ದಾವೋಸ್ ಶೃಂಗಸಭೆ | ರೆನ್ಯೂ ಪವರ್, ಝೈಲಂ, ಆಕ್ಟೋಪಸ್ ಎನರ್ಜಿ ಕಂಪನಿಗಳ ಜತೆ ಮಾತುಕತೆ ನಡೆಸಿದ ಎಂ.ಬಿ.ಪಾಟೀಲ್

ಬೆಂಗಳೂರು : ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯ ಎರಡನೇ ದಿನವಾದ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ರೆನ್ಯೂ ಪವರ್, ಝೈಲಂ ಇಂಕ್ ಮತ್ತು ಆಕ್ಟೋಪಸ್ ಎನರ್ಜಿ ಕಂಪನಿಗಳ ಜತೆ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸೌರ, ಪವನ ಮತ್ತು ಹೈಬ್ರಿಡ್ ವಿದ್ಯುತ್ ಯೋಜನೆಗಳಿಗೆ ಹೆಸರಾಗಿರುವ ರೆನ್ಯೂ ಕಂಪೆನಿಯು ತನ್ನ ಉದ್ದೇಶಿತ ಯೋಜನೆಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ನಾವು ಕೂಡ ನಮ್ಮಲ್ಲಿರುವ ವಿದ್ಯುತ್ ಗ್ರಿಡ್ ಮೂಲಸೌಕರ್ಯ, ಮರುಬಳಕೆ ಇಂಧನ ಉತ್ಪಾದನೆಗೆ ಇರುವ ಅವಕಾಶಗಳು, ವಿದ್ಯುತ್ ಶೇಖರಣೆಯ ಅವಕಾಶಗಳನ್ನು ಕುರಿತು ಹೇಳಿದ್ದೇವೆ ಎಂದಿದ್ದಾರೆ.
ನ್ಯೂಯಾರ್ಕ್ ಮೂಲದ ಝೈಲಂ ಇಂಕ್ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ನೀರು ಪೂರೈಕೆ ಮತ್ತು ತ್ಯಾಜ್ಯ ನೀರು ನಿರ್ವಹಣಾ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಕಂಪನಿಯು ರಾಜ್ಯದ ಯಾವುದಾದರೂ ಒಂದು ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪಿಸಿ, ವಿಸ್ತೃತ ಅಧ್ಯಯನ ಕೈಗೊಳ್ಳಲಯ ಬಯಸಿದೆ. ಇದರ ಮೂಲಕ ಸಮರ್ಥವಾಗಿ ನೀರು ಪೂರೈಕೆ, ತಂತ್ರಜ್ಞಾನದ ಅಳವಡಿಕೆ ಇತ್ಯಾದಿಗಳ ಸ್ವರೂಪ ತಿಳಿಯಲಿದೆ. ಇದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅಗ್ಗದ ದರದಲ್ಲಿ ಕೈಗಾರಿಕೆಳಿಗೆ ನೀರು ಪೂರೈಸುವ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಕ್ಟೋಪಸ್ ಎನರ್ಜಿ ಕಂಪನಿ ಕೂಡ ವಿದ್ಯುತ್ ಕ್ಷೇತ್ರದಲ್ಲಿ ಸ್ಮಾರ್ಟ್ ಮೀಟರ್, ಡಿಜಿಟಲ್ ಸೌಕರ್ಯ, ವೈಜ್ಞಾನಿಕ ಬೆಲೆ ನಿಗದಿ ಮತ್ತು ಗ್ರಿಡ್ ಸುಧಾರಣೆಗೆ ಹೆಸರುವಾಸಿಯಾಗಿದೆ. ಕಂಪನಿಯ ನಿಯೋಗದೊಂದಿಗೆ ವಿ2ಜಿ (ವೆಹಿಕಲ್ ಟು ಗ್ರಿಡ್) ತಂತ್ರಜ್ಞಾನ ಕುರಿತು ವಿಚಾರ ವಿನಿಮಯ ನಡೆಸಲಾಗಿದೆ. ಇದು ಸಾಧ್ಯವಾದರೆ ಗ್ರಾಹಕರಿಗೆ ಹೆಚ್ಚಿನ ಮಿತವ್ಯಯದ ಲಾಭ ಸಿಗಲಿದೆ. ಈ ಸಂಬಂಧ ಚರ್ಚಿಸಲು ಬೆಸ್ಕಾಂ ಜತೆ ಮಾತುಕತೆಗೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಮಾತುಕತೆಗಳಲ್ಲಿ ರೆನ್ಯೂ ಪವರ್ ಮುಖ್ಯಸ್ಥ ಮತ್ತು ಸಿಇಒ ಸುಮಂತ್ ಸಿನ್ಹಾ, ಝೈಲಂ ಇಂಕ್ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಆಲ್ಬರ್ಟ್ ಚೋ, ಆಕ್ಟೋಪಸ್ ಎನರ್ಜಿ ಸಹ ಸಂಸ್ಥಾಪಕ ಸ್ಟುವರ್ಟ್ ಜಾಕ್ಸನ್ ಪಾಲ್ಗೊಂಡಿದ್ದರು.







