ವಿವಾದಾತ್ಮಕ ಹೇಳಿಕೆಗಳಿಗೆ ಬಲಿಯಾದ ಮೇಲ್ಮನೆ ಕಲಾಪ | ಪ್ರಧಾನಿ ಕುರಿತ ಮಾತಿಗೆ ನಸೀರ್ ಅಹ್ಮದ್ ವಿಷಾದ: ‘ಪಾಕಿಸ್ತಾನ ನಾಲಿಗೆ’ ಪದಬಳಕೆಗೆ ಸಿ.ಟಿ.ರವಿ ಬದ್ಧ

ಬೆಂಗಳೂರು : ಪ್ರಧಾನಿ ಮೋದಿ ಕುರಿತಾದ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ ಹೇಳಿಕೆ ಹಾಗೂ ಟೀಕಿಸುವ ಭರದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಬಳಸಿದ ವಿವಾದಾತ್ಮಕ ಪದಬಳಕೆ ವಿಚಾರ ಮೇಲ್ಮನೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಗದ್ದಲ-ಕೋಲಾಹಲ ಉಂಟಾಗಿ ವಾಕ್ಸಮರಕ್ಕೆ ಕಾರಣವಾಯಿತು.
ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ(ಫೆ.2) ಮೇಲ್ಮನೆ ಕಲಾಪದಲ್ಲಿ ಕೇಂದ್ರ ಸರಕಾರದ ಧೋರಣೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ವೇಳೆ ನಸೀರ್ ಅಹ್ಮದ್ ಅವರು ‘ಪ್ರಧಾನಿ ಮೋದಿ ದೇಶದ್ರೋಹಿ’ ಎಂದು ಹರಿಹಾಯ್ದಿದ್ದರು. ಇದನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ನಸೀರ್ ಅಹ್ಮದ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆ ಮಂಗಳವಾರಕ್ಕೆ ಕಲಾಪ ಮುಂದೂಡಲಾಗಿತ್ತು.
ಬೆಳಗ್ಗೆ ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಮತ್ತೆ ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ಸಂವಿಧಾನಿಕ ಹುದ್ದೆಯಲ್ಲಿರುವ ದೇಶದ ಪ್ರಧಾನಿ ಮೋದಿಯವರಿಗೆ ಬಳಸಿದ ಮಾತು ಈ ದೇಶದ ನಾಲಿಗೆ ಆಗಿರಲು ಸಾಧ್ಯವಿಲ್ಲ. ಇದು ಯಾವುದೋ ಪಾಕಿಸ್ತಾನದ ನಾಲಿಗೆ ಆಗಿರಬೇಕು. ಆ ನಾಲಿಗೆ ಯಾವುದೆಂದು ಪತ್ತೆ ಹಚ್ಚಿ ಎಂದು ವಾಗ್ದಾಳಿ ನಡೆಸಿದರು. ಇತರೆ ಸದಸ್ಯರು ಇದಕ್ಕೆ ಅನುಮೋದಿಸಿ ನಸೀರ್ ಅಹ್ಮದ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಧಾನಿಗೆ ದೇಶದ್ರೋಹಿ ಎಂದಿದ್ದಕ್ಕೆ ಸದನದ ಬೇಷರತ್ ಕ್ಷಮೆ ಕೇಳುವಂತೆ ನಸೀರ್ ಅಹ್ಮದ್‍ಗೆ ಸೂಚಿಸಿದರು.
ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಸಿ.ಟಿ.ರವಿ ಬಳಸಿದ ‘ಪಾಕಿಸ್ತಾನ ನಾಲಿಗೆ’ ಪದಬಳಕೆಗೆ ತೀವ್ರವಾಗಿ ಖಂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ‘ಪಾಕಿಸ್ತಾನದ ನಾಲಿಗೆ’ ಎಂದು ಸಿ.ಟಿ.ರವಿ ಹೇಳುತ್ತಾರೆ. ಮೊದಲು ಅವರನ್ನು ಸದನದಿಂದ ಹೊರಹಾಕಿ ಎಂದು ಆಗ್ರಹಿಸಿದರು. ಆಗ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿದ್ದಾಯ್ತು, ಇದೀಗ ಪ್ರಧಾನಿ ಬಗ್ಗೆ ನಿಂದಿಸುತ್ತಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸದನದಿಂದ ಹೊರಹಾಕುವಂತೆ ಒತ್ತಾಯಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿಗಳು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.
ಒಂದು ಗಂಟೆ ಬಳಿಕ ಸದನ ಆರಂಭವಾದಾಗಲೂ ನಸೀರ್ ಅಹ್ಮದ್ ಕ್ಷಮೆಯಾಚನೆಗೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ‘ಸಿ.ಟಿ.ರವಿ ಅವರು ನಮ್ಮ ಸದಸ್ಯರ ಕುರಿತು ಪಾಕಿಸ್ತಾನದ ನಾಲಿಗೆ ಎಂದು ಹೀಯಾಳಿಸಿದ್ದಾರೆ. ಇವರು ಪದೇ ಪದೇ ಯಾಕೆ ನಮಗೆ ಪಾಕಿಸ್ತಾನದ ಹೆಸರು ಹೇಳುತ್ತಾರೆ. ನಾವು ಭಾರತ ದೇಶದವರು. ಇಲ್ಲೆ ಹುಟ್ಟಿ, ಇಲ್ಲೆ ಸಾಯುತ್ತೇವೆ. ನಾವು ಭಾರತದ ದೇಶಭಕ್ತರು. ಈ ದೇಶದ ಹಕ್ಕು, ಗೌರವ ನಮಗೂ ಇದೆ. ಕೂಡಲೇ ಸಿ.ಟಿ.ರವಿ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಆಗಬೇಕೆಂದು ಸಭಾಪತಿಯವರಿಗೆ ದೂರು ನೀಡಿದ್ದೇವೆ ಎಂದರು.
ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ದೂರಿಗೆ ಪ್ರತಿದೂರು ಆಗಬಾರದು. ಮೊದಲು ನಸೀರ್ ಅಹ್ಮದ್ ಅವರು ಕ್ಷಮೆಯಾಚಿಸಬೇಕು. ನಮ್ಮ ಸದಸ್ಯರು ನೇರವಾಗಿ ಯಾರ ಬಗ್ಗೆಯೂ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ತಮ್ಮ ಹೇಳಿಕೆಯಲ್ಲಿ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಕ್ಷಮೆಯಾಚಿಸುವುದಿಲ್ಲ’ ಎಂದು ಸಿ.ಟಿ.ರವಿ ಸಮರ್ಥಿಸಿಕೊಂಡರು. ಈ ವೇಳೆ ಉಭಯ ಪಕ್ಷಗಳ ನಡುವೆ ಮಾತಿನ ಜಟಾಪಟಿ ಮುಂದುವರೆಯಿತು. ನಸೀರ್ ಅಹ್ಮದ್ ಹಾಗೂ ಸಿ.ಟಿ.ರವಿ ಇಬ್ಬರು ವಿಷಾದ ವ್ಯಕ್ತಪಡಿಸುವಂತೆ ಸಭಾಪತಿ ಹೊರಟ್ಟಿ ಅವರು ಸೂಚನೆ ನೀಡಿದರು.
ಬಳಿಕ ಪ್ರತಿಕ್ರಿಯಿಸಿದ ನಸೀರ್ ಅಹ್ಮದ್, ‘ಕರ್ನಾಟಕಕ್ಕೆ ಕೇಂದ್ರ ಸರಕಾರ ಮಾಡಿರುವ ಅನ್ಯಾಯವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು ದ್ರೋಹಿ ಎಂದು ಕರೆದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಹೇಳುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ‘ವಿಷಾದ ಬೇಡ. ಕ್ಷಮೆ ಎನ್ನಬೇಕು’ ಎಂದು ಆಗ್ರಹಿಸಿದರು. ಇದರಿಂದ ಸಿಟ್ಟಾದ ಸಭಾಪತಿ ವಿಷಾದವೆಂದರೆ ಕ್ಷಮೆ ಎಂದರ್ಥವಲ್ಲವೇ? ಎಂದು ಪ್ರಶ್ನಿಸಿ, ಸಿ.ಟಿ.ರವಿಗೆ ವಿಷಾದ ವ್ಯಕ್ತಪಡಿಸುವಂತೆ ಹೇಳಿದರು.
‘ದೂರು ಕೊಟ್ಟವರನ್ನು, ಆಪಾದಿತನನ್ನು ಒಂದೇ ತಕ್ಕಡಿಗೆ ಹಾಕುತ್ತೀರಾ? ಎಂದರೆ ನಿಮ್ಮ ಮಾತಿಗೆ ನಾನು ಬದ್ಧ. ಭಾರತೀಯ ನಾಲಿಗೆ ಈ ರೀತಿ ಮಾತನಾಡಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದೇನೆ. ನಾಲಿಗೆ ಯಾರದ್ದು ಪತ್ತೆ ಹಚ್ಚಿ ಎಂದು ಪೀಠಕ್ಕೆ ನಾನು ಮನವಿ ಮಾಡಿದ್ದೇನೆ ಅಷ್ಟೇ. ಹೀಗಾಗಿ ಕ್ಷಮೆಯಾಚಿಸಲಾರೆ’ ಎಂದು ಸಿ.ಟಿ.ರವಿ ಪುನರುಚ್ಚಸಿದರು. ಇದರಿಂದ ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದ್ದಂತೆ ಸದನವನ್ನು ಮತ್ತೆ ಮುಂದೂಡಲಾಯಿತು.







