ಅಝೀಂ ಪ್ರೇಮ್ಜಿ ವಿವಿ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಹಿಂಪಡೆಯಲು ಸಾಹಿತಿ, ಚಿಂತಕರು ಆಗ್ರಹ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ‘ಸ್ಪಾರ್ಕ್ ರೀಡಿಂಗ್ ಸರ್ಕಲ್’ ವಿದ್ಯಾರ್ಥಿಗಳ ಮೇಲೆ ವಿಶ್ವ ವಿದ್ಯಾನಿಲಯವು ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ತಕ್ಷಣವೇ ಕೈಬಿಡಬೇಕು ಎಂದು ಸಾಹಿತಿ, ಚಿಂತಕರು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸೋಮವಾರ ಈ ಕುರಿತು ಅಝೀಂ ಪ್ರೇಮ್ ಜಿ ವಿಶ್ವ ವಿದ್ಯಾನಿಲಯದ ಕುಲಪತಿಗಳಿಗೆ ಪತ್ರ ಬರೆದಿರುವ ಹಿರಿಯ ಸಾಹಿತಿಗಳಾದ ಡಾ.ಜಿ.ರಾಮಕೃಷ್ಣ, ರಾಜೇಂದ್ರ ಚೆನ್ನಿ, ಡಾ.ಸಿದ್ದನಗೌಡ ಪಾಟೀಲ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ದು.ಸರಸ್ವತಿ, ವಿಮಲಾ ಕೆ.ಎಸ್.ಅವರು, ಕರ್ನಾಟಕದ ಶೈಕ್ಷಣಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರತಿನಿಧಿಗಳಾದ ನಾವು, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ತನ್ನದೇ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಶ್ವ ವಿದ್ಯಾನಿಲಯವೊಂದು ತನ್ನದೇ ಆದ ಆಂತರಿಕ ಪ್ರಕ್ರಿಯೆಗಳನ್ನು ನಡೆಸುವಂತಹ ಹಕ್ಕನ್ನು ಹೊಂದಿದ್ದರೂ ವಿದ್ಯಾರ್ಥಿ-ಯುವಜನರು ಒಂದು ಚರ್ಚೆಯನ್ನು ಹಮ್ಮಿಕೊಂಡಿದ್ದ ಒಂದೇ ಕಾರಣಕ್ಕೆ ಅವರ ಮೇಲೆ ‘ಭಾರತೀಯ ನ್ಯಾಯ ಸಂಹಿತೆ' ಮತ್ತು ‘ಐಟಿ ಕಾಯ್ದೆ' ಅಡಿಯಲ್ಲಿ ಮೊಕದ್ದಮೆ ದಾಖಲಿಸುವುದು ಅತ್ಯಂತ ಅತಿರೇಕದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಅದರಲ್ಲಿಯೂ ಮುಖ್ಯವಾಗಿ ವಿಶ್ವ ವಿದ್ಯಾನಿಲಯಗಳು ಚರ್ಚೆ ಮತ್ತು ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜದ ಮತ್ತು ಪ್ರಭುತ್ವದ ಧೋರಣೆಗಳನ್ನು ವಿಮರ್ಶಿಸುವಂತೆ ಹುರಿದುಂಬಿಸುವ ವಲಯಗಳಾಗಬೇಕು. ಹೀಗಿರುವಾಗ, ಗೂಂಡಾ ಪಡೆಗಳು ವಿಶ್ವವಿದ್ಯಾಲಯದೊಳಗೆ ನುಗ್ಗಿದ್ದೂ ಅಲ್ಲದೇ ದಾಂಧಲೆ ನಡೆಸಿ, ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವಂತಹ ಸಂದರ್ಭದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಬೇಕಿದ್ದ ವಿಶ್ವವಿದ್ಯಾಲಯದ ಅಧಿಕಾರಿ ವರ್ಗ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆಯೇ ಎಫ್ಐಆರ್ ದಾಖಲಿಸಿದೆ. ಈ ಮೂಲಕ ವಿಶ್ವವಿದ್ಯಾಲಯವು ತಾನು ಪಠ್ಯಕ್ರಮದಲ್ಲಿ ಪ್ರತಿಪಾದಿಸುವ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನೇ ಹತ್ತಿಕ್ಕಲು ಮುಂದಾಗಿದೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯವು ಗೂಂಡಾಗಳ ಬಗ್ಗೆ ಮೃದು ಧೋರಣೆ ತೋರುತ್ತಿದ್ದು, ವಿಶ್ವವಿದ್ಯಾಲಯದ ಆವರಣಕ್ಕೆ ಅಕ್ರಮವಾಗಿ ನುಗ್ಗಿ, ಆಸ್ತಿಪಾಸ್ತಿ ಹಾನಿ ಮಾಡಿ, ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಹೊರಗಿನ ವ್ಯಕ್ತಿಗಳ ಮೇಲೆ ಕೇವಲ ಜಾಮೀನು ಲಭ್ಯವಿರುವ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈ ಹಿಂದೆ ನಡೆದ ಘಟನೆಗಳ ಬಗ್ಗೆ ಚರ್ಚೆ-ಸಂವಾದ ನಡೆಸಲು ಮುಂದಾದ ನಿಮ್ಮದೇ ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿದ್ದೀರಿ. ಈ ನಿಲುವಿನಿಂದಾಗಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಡೆಯನ್ನು ಹೊರಗಿನಿಂದ ಬಂದ ಗೂಂಡಾಗಳಿಗೆ ಸಮೀಕರಿಸಿದಂತಾಗಿದೆ. ಹಾಗಾಗಿ, ಭಿನ್ನಾಭಿಪ್ರಾಯಗಳಿಗೆ ಮತ್ತು ಸಂವಾದಕ್ಕೆ ನಿಮ್ಮ ವಿಶ್ವ ವಿದ್ಯಾನಿಲಯದಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನು ಕರ್ನಾಟಕದ ಜನತೆಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೂಡಲೇ ‘ಸ್ಪಾರ್ಕ್ ರೀಡಿಂಗ್ ಸರ್ಕಲ್'ನ ಭಾಗವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ದಾಖಲಿಸಿರುವ ಪೊಲೀಸ್ ದೂರನ್ನು ತಕ್ಷಣವೇ ಹಿಂಪಡೆಯಬೇಕು. ಈ ಮೂಲಕ ವಿಶ್ವವಿದ್ಯಾಲಯವು ವಿದ್ಯಾರ್ಥಿ-ವಿದ್ಯಾರ್ಥಿನಿಯರ, ಪೋಷಕರ ವಿಶ್ವಾಸವನ್ನು ಮರಳಿ ಗಳಿಸುತ್ತದೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಂಬಿದ್ದೇವೆ ಎಂದು ತಿಳಿಸಿದ್ದಾರೆ.







