ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗ್ರೂಪ್ ‘ಬಿ’ ಹುದ್ದೆಗಳ ಪರೀಕ್ಷೆಯ ಕೀ ಉತ್ತರ ಪ್ರಕಟ

ಬೆಂಗಳೂರು : ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಸಂಬಂಧ ಎ.10ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಕೆಇಎ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಒದಗಿಸಲಾದ https://cetonline.karnataka.gov.in/kea ಮೂಲಕ ಎ.13 ಬೆಳಗ್ಗೆ 10 ಘಂಟೆಯೊಳಗೆ ಸಲ್ಲಿಸಬಹುದಾಗಿದೆ.
ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಸಲ್ಲಿಸಲಾಗುವ ಪ್ರತಿ ಆಕ್ಷೇಪಣೆಗೆ 25 ರೂ.ನ್ನು ಪಾವತಿಸಬೇಕು. ಆಕ್ಷೇಪಣೆ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಅಪೂರ್ಣ, ಆಧಾರರಹಿತವಾಗಿರುವ ಹಾಗೂ ಶುಲ್ಕ ಪಾವತಿಸದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಪ್ರಕಟನೆ ತಿಳಿಸಿದೆ.







