ಕರ್ನಾಟಕದಲ್ಲಿ ತಂತ್ರಜ್ಞಾನ-ನವೋದ್ಯಮ ಸಂಯೋಜನೆ; ಮಾರ್ಗಸೂಚಿ ಅನುಷ್ಠಾನಕ್ಕೆ ಒತ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮೇ 11 : ರಾಜ್ಯವನ್ನು ತಂತ್ರಜ್ಞಾನ ಮತ್ತು ನವೋದ್ಯಮ ಆಧಾರಿತ ಆರ್ಥಿಕಾಭಿವೃದ್ಧಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಸಿದ್ಧಪಡಿಸಿರುವ ‘ಕರ್ನಾಟಕದಲ್ಲಿ ತಂತ್ರಜ್ಞಾನ-ನವೋದ್ಯಮ ಸಂಯೋಜನೆ-ಹೊಸ ಮಾರ್ಗಸೂಚಿ 2026’ ಅನ್ನು ಅನುಷ್ಠಾನ ಮಾಡಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್.ಮೋಹನದಾಸ್ ಹೆಗ್ಡೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಕರ್ನಾಟಕವು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ, ಸೆಮಿಕಂಡಕ್ಟರ್ ವಿನ್ಯಾಸ, ಜೈವಿಕ ತಂತ್ರಜ್ಞಾನ, ಅಂತರಿಕ್ಷ ಸಂಶೋಧನೆ, ಕೃತಕ ಬುದ್ಧಿಮತ್ತೆ (ಎಐ), ಡಿಜಿಟಲ್ ಆಡಳಿತ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ, ಈ ಬೆಳವಣಿಗೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ಇತರೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬೇಕಾದ ಅಗತ್ಯ ಇದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ‘ಕರ್ನಾಟಕದಲ್ಲಿ ತಂತ್ರಜ್ಞಾನ-ನವೋದ್ಯಮ ಸಂಯೋಜನೆ ಹೊಸ ಮಾರ್ಗಸೂಚಿ 2026’ ಅನ್ನು ಸಿದ್ದಪಡಿಸಿ, ಸರಕಾರಕ್ಕೆ ಸಲ್ಲಿಸಿದ್ದು, ಯೋಜನೆಯಾಗಿ ರೂಪಿಸಬೇಕು. ಈ ಯೋಜನೆಯಡಿ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಕೈಗಾರಿಕೆಗಳು, ಹೂಡಿಕೆದಾರರು ಹಾಗೂ ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಏಕೀಕೃತ ನವೋದ್ಯಮ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ.
ಯೋಜನೆಯ ಪ್ರಮುಖ ಅಂಶವಾಗಿ ‘ಕರ್ನಾಟಕ ಇನೋವೇಶನ್ ಆರ್ಕೆಸ್ಟ್ರೇಶನ್ ಸೆಂಟರ್ಗಳನ್ನು’ ಸ್ಥಾಪನೆ ಮಾಡಬೇಕು. ಇವು ಡೀಪ್-ಟೆಕ್ ಇನ್ಕ್ಯುಬೇಶನ್, ಸಂಯುಕ್ತ ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಸ್ವತ್ತಿನ ಬೆಂಬಲ, ಕೌಶಲಾಭಿವೃದ್ಧಿ, ಪ್ರೋಟೋಟೈಪ್ ಅಭಿವೃದ್ಧಿ, ಸ್ಟಾರ್ಟ್ಅಪ್ ಮಾರ್ಗದರ್ಶನ ಮತ್ತು ಸ್ಥಳೀಯ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಪ್ರಾದೇಶಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯನ್ನು 2026 ರಿಂದ 2032ರವರೆಗೆ ಹಂತಹಂತವಾಗಿ ಜಾರಿ ಮಾಡಬೇಕು. ಈ ಮೂಲಕ ಉನ್ನತ ಮಟ್ಟದ ಉದ್ಯೋಗ ಸೃಷ್ಟಿ, ಸ್ಥಳೀಯ ತಂತ್ರಜ್ಞಾನಗಳ ವಾಣಿಜ್ಯೀಕರಣ, ಜಾಗತಿಕ ಹೂಡಿಕೆ ಆಕರ್ಷಣೆ, ತಂತ್ರಜ್ಞಾನ ಸ್ವಾವಲಂಬನೆ ಹಾಗೂ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡಬೇಕು ಎಂದು ಎಸ್. ಮೋಹನದಾಸ್ ಹೆಗ್ಡೆ ಹೇಳಿದ್ದಾರೆ.
ಈ ಮಾರ್ಗಸೂಚಿಯು ಕರ್ನಾಟಕವನ್ನು ಭಾರತದ ನವೋದ್ಯಮ ರಾಜಧಾನಿಯಾಗಿ ಮಾತ್ರವಲ್ಲದೆ, ‘ನವ ಕರ್ನಾಟಕ 2047’ ದೃಷ್ಟಿಕೋನಕ್ಕೆ ಹೊಂದಿಕೊಳ್ಳುವ ವಿಕೇಂದ್ರೀಕೃತ, ನೈತಿಕ ಹಾಗೂ ತಂತ್ರಜ್ಞಾನ ಚಾಲಿತ ಅಭಿವೃದ್ಧಿಯ ಜಾಗತಿಕ ಮಾದರಿಯನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.






