ಮಹಿಳೆ ಏಕ ಶಿಲಾಫಲಕದ ರಚನೆಯಲ್ಲ : ಡಾ.ರೂತ್ ಮನೋರಮಾ

ಬೆಂಗಳೂರು : ಮಹಿಳೆ ಎಂದರೆ ಏಕ ಶಿಲಾಫಲಕದ ರಚನೆ ಅಲ್ಲ. ಅದರಲ್ಲಿ ಮುಸ್ಲಿಮ್, ದಲಿತ, ಧಾರ್ಮಿಕ, ಭಾಷಾ ಅಲ್ಪಸಂಖ್ಯಾತ, ದಮನಿತ ಸಮುದಾಯಕ್ಕೆ ಸೇರಿದ ಎಲ್ಲ ಮಹಿಳೆಯರೂ ಇದ್ದಾರೆ ಎಂದು ದಲಿತ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷೆ ಹಾಗೂ ಮಹಿಳಾ ಹೋರಾಟಗಾರ್ತಿ ಡಾ.ರೂತ್ ಮನೋರಮಾ ಹೇಳಿದ್ದಾರೆ.
ರವಿವಾರ ನಗರದ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಹಿಳಾ ಹೋರಾಟಗಾರ್ತಿಯರು ಸೇರಿ ಸ್ತ್ರೀವಾದಿ ದೃಷ್ಟಿಕೋನದಿಂದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟ, ಸಂಘಟನೆ, ಇತಿಹಾಸವನ್ನು ನೋಡುವ ಉದ್ದೇಶದಿಂದ ಜಂಟಿಯಾಗಿ ಆಯೋಜಿಸಿದ್ದ ‘ಟ್ರಾನ್ಸ್ ಫೆಮನಿಸ್ಟ್ ಕಲೆಕ್ಟಿವ್’ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸ್ತ್ರೀವಾದದ ಹಿನ್ನೆಲೆಯಲ್ಲಿ ಶೋಷಿತ ಲಿಂಗವಾಗಿ ಒಗ್ಗಟ್ಟಾಗಬೇಕು ಎನ್ನುವ ದೃಷ್ಟಿಯಿಂದ ಆರಂಭವಾಗಿರುವ ಈ ವೇದಿಕೆಗೆ ಈವತ್ತಿನ ಸಂದರ್ಭದಲ್ಲಿ ಬಹಳ ಮಹತ್ವವಿದೆ. ಈ ಎಲ್ಲ ಮಹಿಳೆಯರ ಹಕ್ಕೊತ್ತಾಯಗಳು ವಿಶಾಲ ಮಹಿಳಾ ಚಳವಳಿ ಹಕ್ಕೊತ್ತಾಯದ ಮೂಲಕ ಹೊಸದಾದ ಜೀವ ಪಡೆದುಕೊಳ್ಳಬೇಕು. ಮಹಿಳಾ ಚಳವಳಿ ಮತ್ತೊಂದು ವೇಗದ ಜೊತೆಗೆ ಪ್ರಸ್ತುತದ ಹಲವು ಸವಾಲುಗಳನ್ನು ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಈ ವೇದಿಕೆ ಇನ್ನಷ್ಟು ಮಹತ್ವದ ಕೆಲಸ ಮಾಡಲಿ ಎಂದು ರೂತ್ ಮನೋರಮಾ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಹಲವು ಗೋಷ್ಠಿಗಳಲ್ಲಿ ಇತ್ತೀಚೆಗೆ ಕೇಂದ್ರ ಸರಕಾರ ಜಾರಿ ಮಾಡಿರುವ ಟ್ರಾನ್ಸ್ ಟೆಂಡರ್ ಕಾಯ್ದೆಗೆ ಸಂಬಂಧಪಟ್ಟಂತೆ ಮತ್ತು ದೀರ್ಘಕಾಲದಲ್ಲಿ ಶೋಷಣೆಗೆ ಒಳಗಾಗಿರುವ ಎಲ್ಲ ಬಗೆಯ ಲಿಂಗತ್ವದ ವ್ಯಕ್ತಿಗಳು, ಅತ್ಯಂತ ಶೋಷಣೆಗೆ ಒಳಗಾಗಿರುವ ದಲಿತ, ಮುಸ್ಲಿಮ್, ಆದಿವಾಸಿ, ಲಿಂಗತ್ವ ಮತ್ತು ಅಲ್ಪಸಂಖ್ಯಾತ ಮಹಿಳೆಯರು, ದೌರ್ಜನ್ಯ, ದಮನ, ಶೋಷಣೆಗೆ ಒಳಗಾದವರೆಲ್ಲರನ್ನೂ ಹೇಗೆ ಬೆಸೆಯಬೇಕು ಎನ್ನುವುದರ ಕುರಿತು ಚರ್ಚೆ-ಸಂವಾದಗಳು ನಡೆಯಿತು.
ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿಯರಾದ ಅಕ್ಕೈ ಪದ್ಮಶಾಲಿ, ಸೌಮ್ಯ, ಉಮಾ, ಚಾಂದಿನಿ, ಕ್ರಿಸ್ಟಿ, ರಕ್ಷಿತಾ, ಮಹಿಳಾ ಹೋರಾಟಗಾರ್ತಿಯರಾದ ಮಧುಭೂಷಣ್, ಶಕುಣ್, ರೇವತಿ, ಕೌದಿ ಪ್ರಕಾಶನದ ಮಮತಾ, ವಕೀಲೆ ಮನೋರಂಜನಿ ಹಲವರು ಭಾಗವಹಿಸಿದ್ದರು.
ಟ್ರಾನ್ಸ್‌ಜೆಂಡರ್ ನಂತಹ ಅನೇಕ ಸವಾಲುಗಳು ಸಮುದಾಯದ ಮುಂದೆ ಬಹಳ ಕಾಲದಿಂದಲೂ ಬರುತ್ತಿವೆ. ಅವುಗಳನ್ನು ಸಮುದಾಯ ಆಗಿಂದಾಗಲೇ ಅಲ್ಲಲ್ಲೇ ಹೊಡೆದಾಡುತ್ತಿದೆ. ತನ್ನ ಅಸ್ತಿತ್ವ, ಘನತೆಗೋಸ್ಕರ, ಸಂವಿಧಾನ ಕೊಟ್ಟಿರುವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ. ಈ ಸಮುದಾಯಕ್ಕೆ ಮುಂದೆ ಕೂಡ ಅನೇಕ ಸಮಸ್ಯೆಗಳು ಎದುರಾಗಲಿದೆ ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ಪ್ರಸ್ತುತ ಸಮಾಜದಲ್ಲಿ ಮಹಿಳಾ-ಟ್ರಾನ್ಸ್ಜೆಂಡರ್ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳು ಮುಖ್ಯವಾಹಿನಿಗೆ ಬರುತ್ತಿಲ್ಲ.
-ಮಲ್ಲಿಗೆ ಸಿರಿಮನೆ, ಮಹಿಳಾ ಹೋರಾಟಗಾರ್ತಿ






